ಹುಬ್ವಳ್ಳಿ : ಚಂದ್ರಮೌಳೀಶ್ವರ ದೇವಸ್ಥಾನ ಐತಿಹಾಸಿಕವಾದುದು. ಅದರ ಸಂರಕ್ಷಣೆ, ಅಭಿವೃದ್ಧಿ ಚಟುವಟಿಕೆ ನಡೆಸುವುದೇನಿದ್ದರೂ ಪುರಾತತ್ವ ಇಲಾಖೆಗೆ ಸೇರಿದ್ದು. ರಾಜ್ಯ ಸರ್ಕಾರದ ಪಾತ್ರ ಏನೂ ಇರುವುದಿಲ್ಲ. ಆದರೆ ಪುರಾತತ್ವ ಇಲಾಖೆ ಉದ್ದೇಶಿತ ಯೋಜನೆಗೆ ಸಹಕಾರ ನೀಡಬೇಕು ಎಂಬುದರ ಬಗ್ಗೆ ಪರಿಶೀಲಿಸಿ ಸರ್ಕಾರಕ್ಕೆ ವರದಿ ಕೊಡುತ್ತದೆ ಎಂದು ವಿಧಾನಸಭೆ ಅರ್ಜಿ ಸಮಿತಿ ಅಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ನಗರದ ಉಣಕಲ್ ನಲ್ಲಿರುವ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನಕ್ಕೆ ಸಮಿತಿ ಸದಸ್ಯರ ನಿಯೋಗದೊಂದಿಗೆ ಭೇಟಿ ನೀಡಿದ ಬಳಿಕ ಮಾತನಾಡಿದರು. ಈ ದೇವಸ್ಥಾನ ಪುರಾತನವಾದುದು. ಪುರಾತತ್ವ ಇಲಾಖೆಗೆ ಅದರದ್ದೇ ಆದ ನಿಯಮ, ಕಾನೂನುಗಳಿವೆ. ದೇವಸ್ಥಾನದ ಅಕ್ಕಪಕ್ಕ ಮತ್ತು ಹಿಂದೆ ಮುಂದೆ 54 ಮನೆಗಳಿವೆ. ಅವರಿಗೆ ತೊಂದರೆಯಾಗುತ್ತಿದೆ ಎಂದು ನಿವಾಸಿಗಳು ಹೇಳಿಕೊಂಡಿದ್ದಾರೆ.
ಹಲವಾರು ದಶಕಗಳಿಂದ ಎದುರಿಸಿಕೊಂಡು ಬಂದ ಸಮಸ್ಯೆ ವಿವರಿಸಿದ್ದಾರೆ. ಹೀಗಾಗಿ ಪುರಾತತ್ವ ಇಲಾಖೆ ಉದ್ದೇಶಿತ ಯೋಜನೆಗೂ ಸಹಕಾರಿಯಾಗಬೇಕು, ನಿವಾಸಿಗಳ ಸಮಸ್ಯೆಯೂ ಪರಿಹಾರವಾಗಬೇಕು. ದೇವಸ್ಥಾನವೂ ಸಂರಕ್ಷಣೆಯಾಗಬೇಕಾಗಿದೆ.. ಹೀಗಾಗಿ ಇವೆಲ್ಲ ದೃಷ್ಟಿಕೋನ ಗಮನದಲ್ಲಿಟ್ಟುಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಹೇಳಿದರು. ಇದೇ ವೇಳೆ ದೇವಸ್ಥಾನದ ಅಕ್ಕಪಕ್ಕದ ನಿವಾಸಿಗಳು ಸಮಿತಿ ಅಧ್ಯಕ್ಷರಿಗೆ ತಮ್ಮ ಅಳಲು ಹೇಳಿಕೊಂಡರು. ಬೇರೆ ಕಡೆ ತಮಗೆ ನಿವೇಶನ ಒದಗಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಕೋರಿದರು.
ಚಂದ್ರಮೌಳೀಶ್ವರ ದೇವರಿಗೆ ಪೂಜೆ ಸಲ್ಲಿಸಿದ ನಿಯೋಗ : ಇದಕ್ಕೂ ಮುಂಚೆ ಚಂದ್ರಮೌಳೀಶ್ವರ ದೇವರಿಗೆ ಪೂಜೆ ಸಮಿತಿ ಅಧ್ಯಕ್ಷ ರುದ್ರಪ್ಪ ಲಮಾಣಿ, ಎಸ್ ಸುರೇಶಕುಮಾರ, ಮಂಜುನಾಥ, ದರ್ಶನ ಪುಟ್ಟಣ್ಣಯ್ಯ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ, ಜಿಲ್ಲಾಧಿಕಾರಿ ದಿವ್ಯಪ್ರಭ ಹಾಗೂ ಇತರ ಅಧಿಕಾರಿಗಳು ಪೂಜೆ ಸಲ್ಲಿಸಿದರು.
