Home ನಮ್ಮ ಜಿಲ್ಲೆ ಧಾರವಾಡ ಹುಬ್ಬಳ್ಳಿ – ಧಾರವಾಡದಲ್ಲಿ ಮಳೆಯಬ್ಬರ; ಜನಜೀವನ ಅಸ್ತವ್ಯಸ್ತ

ಹುಬ್ಬಳ್ಳಿ – ಧಾರವಾಡದಲ್ಲಿ ಮಳೆಯಬ್ಬರ; ಜನಜೀವನ ಅಸ್ತವ್ಯಸ್ತ

0

ಹುಬ್ಬಳ್ಳಿ: ಮೂರು ದಿನಗಳಿಂದ ಕಿತ್ತೂರು ಕರ್ನಾಟಕದಲ್ಲಿ ಬಿಡುವು ಕೊಟ್ಟಿದ್ದ ಮಳೆ ಶುಕ್ರವಾರ ಹುಬ್ಬಳ್ಳಿ-ಧಾರವಾಡ ಹಾಗೂ ಇತರ ಕೆಲ ಕಡೆಗಳಲ್ಲಿ ಮತ್ತೆ ಸುರಿಯಿತು. ಬೆಳಿಗ್ಗೆಯಿಂದ ಒಣಹವೆ ಇದ್ದ ಹುಬ್ಬಳ್ಳಿ-ಧಾರವಾಡದಲ್ಲಿ ಇತ್ತೀಚಿನ ದಿನಗಳಲ್ಲಿಯೇ ಅತೀ ಹೆಚ್ಚು ಎಂಬಷ್ಟು ರಭಸದ ಮಳೆಯಾಯಿತು.

ಅವಳಿನಗರದಲ್ಲಿ ಮಧ್ಯಾಹ್ನದ ನಂತರ ಏಕಾಏಕಿ ಸುರಿದ ಕುಂಭದ್ರೋಣ ಮಳೆಯಿಂದ ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಯಿತು. ಪ್ರಸಕ್ತ ಮಳೆ ಋತುವಿನ ಕೊನೇ ಹಂತದಲ್ಲಿ ಸುರಿದ ಈ ಭಾರೀ ಮಳೆಗೆ ಅವಳಿನಗರದ ಮೂಲ ಸವಲತ್ತುಗಳೆಲ್ಲ ವಿರೂಪಗೊಂಡು ಸಮಸ್ಯೆ ಸೃಷ್ಟಿಯಾಗಿದೆ. ಧಾರವಾಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಹುಬ್ಬಳ್ಳಿ-ಧಾರವಾಡದ ರಸ್ತೆಗಳೆಲ್ಲ ಕೃತಕ ಪ್ರವಾಹದಿಂದ ಜಲಾವೃತಗೊಂಡಿದ್ದು, ಇರುವ ಕೆಲವಾರು ತೆರೆದ ಚರಂಡಿಗಳು ತುಂಬಿ ರಸ್ತೆಗಳ ಮೇಲೆ ಹರಿಯುತ್ತಿವೆ. ಬಹುತೇಕ ಚರಂಡಿಗಳು ನಿರ್ವಹಣೆ ಇಲ್ಲದೇ ಮಣ್ಣಲ್ಲಿ ಮುಚ್ಚಿ ಹೋಗಿರುವುದರಿಂದ ಇಳಿಜಾರಿನ ರಸ್ತೆಗಳಷ್ಟೇ ಅಲ್ಲದೇ, ಸಮತಟ್ಟು ಪ್ರದೇಶದಲ್ಲಿನ ರಸ್ತೆಗಳೂ ನೀರಲ್ಲಿ ಮುಳುಗಿ ಹೋದವು.

ವಿಶ್ವ ಖ್ಯಾತಿಯ ಯೋಜನೆ ಎಂದು ಆಡಳಿತ ಯಂತ್ರ ಹೇಳಿದರೂ, ಅವೈಜ್ಞಾನಿಕ ಎಂದು ಈಗಾಗಲೇ ದೃಢಪಟ್ಟಿರುವ (ಕೇಂದ್ರ ಸರ್ಕಾರ ಕೂಡ ಹೇಳಿರುವ) ಹುಬ್ಬಳ್ಳಿ-ಧಾರವಾಡ ನಡುವಿನ 20 ಕಿಮೀ ಬಿಆರ್‌ಟಿಎಸ್ ಕಾರಿಡಾರ್ ನೀರಿನಿಂದ ಮುಚ್ಚಿ ಹೋಗಿತ್ತು. ಹೀಗಾಗಿ ಬಸ್ ಮತ್ತಿತರ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ತಗ್ಗು ಪ್ರದೇಶದ ಮನೆಗಳಲ್ಲಿ ಹಾಗೂ ಬಹುತೇಕ ಅಪಾರ್ಟ್ಮೆಂಟ್-ವಾಣಿಜ್ಯ ಕಾಂಪ್ಲೆಕ್ಸ್ ತಳಮಹಡಿಗಳು ನೀರಿನಿಂದ ತುಂಬಿ ಹೋಗಿ ಜನ ಹೊರಬರದಂತಾಯಿತು.

ಕಿತ್ತೂರು ಕರ್ನಾಟಕದ ಉಳಿದ ಕೆಲವು ಬಯಲು ಜಿಲ್ಲೆಗಳಲ್ಲಿ ಕೂಡ ಮಳೆ ಬೀಳುತ್ತಿದ್ದು, ಹುಬ್ಬಳ್ಳಿ – ಧಾರವಾಡದಷ್ಟು ಬಿರುಸು – ರಭಸ ಇರಲಿಲ್ಲ. ಹಾವೇರಿ ಮತ್ತು ಗದಗ ಜಿಲ್ಲೆಯಲ್ಲಿ ಸ್ವಲ್ಪ ಹೊತ್ತು ಜಿಟಿಜಿಟಿ ಮಳೆಯಾಗಿ ಮೋಡ ಕವಿದ ವಾತಾವರಣ ದಿನವಿಡೀ ಇತ್ತು.

ಬೆಳಗಾವಿ ಜಿಲ್ಲೆಯಲ್ಲಿ ಮಧ್ಯಾಹ್ನ ಮತ್ತು ಸಂಜೆಯ ವೇಳೆ ಜೋರಾಗಿ ಸುರಿದು ನಂತರ ನಿಂತಿತು. ವಿಜಯಪು ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿದಿತ್ತು. ಮಲೆನಾಡಿನ ಸೀಮೆಯಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನವಿಡೀ ಬಿಸಿಲಿತ್ತು.

NO COMMENTS

LEAVE A REPLY

Please enter your comment!
Please enter your name here

Exit mobile version