ಮೈಸೂರು: ರೈತರ ಕಲ್ಯಾಣಕ್ಕೆ ಸಂಬಂಧಿಸಿದಂತೆ ನೂರು ಮಸೂದೆಗಳನ್ನು ಸಿದ್ಧಪಡಿಸಲಾಗುತ್ತಿದ್ದು ಇದರ ಜವಾಬ್ದಾರಿಯನ್ನು ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಗೆ ವಹಿಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ವಿದ್ಯಾವಿಕಾಸ ಕಾನೂನು ಅಧ್ಯಯನ ಸಂಸ್ಥೆಯಲ್ಲಿ ಶುಕ್ರವಾರ ನಡೆದ `ಕೃಷಿ ಉತ್ಪಾದನೆ ಮಾರುಕಟ್ಟೆಯಲ್ಲಿ ಕಾನೂನು’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ರೈತರು ಬೆಳೆಯುವ ಬೆಳೆಗಳಿಗೆ ಕನಿಷ್ಠ ಬೆಂಬಲ ನೀಡದೆ ಇರುವುದು ಅಪರಾಧ ಎನ್ನುವ ಕಾನೂನು ತರಬೇಕು. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ರೈತರ ಶೋಷಣೆ ನಿಂತಿಲ್ಲ. ಶೋಷಣೆ ನಿಲ್ಲಬೇಕಾದರೆ ಕಾನೂನು ತರಬೇಕಾದ ಅನಿವಾರ್ಯತೆ ಇದೆ ಎಂದರು.
ರೈತರು ಬೆಳೆದ ಬೆಳೆಯನ್ನು ಖರೀದಿ ಮಾಡುವ ವರ್ತಕರು ಡಿಜಿಟಲ್ ವಿಧಾನದಲ್ಲಿ ರೈತನಿಗೆ ಹಣ ಪಾವತಿ ಮಾಡುವ ವ್ಯವಸ್ಥೆ ಜಾರಿಯಾಗಬೇಕು. ಇದರಿಂದ ವರ್ತಕರು ಕಪ್ಪು ಹಣ ಚಲಾವಣೆ ಮಾಡುವುದು ತಪ್ಪುತ್ತದೆ.
ರೈತನಿಗೆ 1000 ರೂ. ನೀಡಿ ವರ್ತಕರು ತಮ್ಮ ಬಿಲ್ ಬುಕ್‌ನಲ್ಲಿ ತಮಗೆ ಬೇಕಾದಷ್ಟು ಬೆಲೆಯನ್ನು ನಮೂದಿಸುವ ಅವಕಾಶಗಳೂ ಇರುತ್ತವೆ. ಹೀಗಾಗಿ ಡಿಜಿಟಲ್ ಪೇಮೆಂಟ್‌ಗೆ ಒತ್ತು ನೀಡಬೇಕು. ಆಗ ರೈತರಿಗೂ ತಮಗೆ ಎಷ್ಟು ಹಣ ದೊರೆಯಿತು ಎಂದು ತಿಳಿಯುತ್ತದೆ. ವರ್ತಕರಿಂದ ವಂಚನೆಗೆ ಒಳಗಾಗುವುದು ತಪ್ಪುತ್ತದೆ ಎಂದರು.