Home ನಮ್ಮ ಜಿಲ್ಲೆ ಧಾರವಾಡ ಧಾರವಾಡ: ಕೃಷಿ ಮೇಳದಲ್ಲಿ ಫಲ-ಪುಷ್ಪ ಪ್ರದರ್ಶನ, ಬೀಜ ಮೇಳಕ್ಕೆ ಚಾಲನೆ

ಧಾರವಾಡ: ಕೃಷಿ ಮೇಳದಲ್ಲಿ ಫಲ-ಪುಷ್ಪ ಪ್ರದರ್ಶನ, ಬೀಜ ಮೇಳಕ್ಕೆ ಚಾಲನೆ

0

ಧಾರವಾಡ: ಕೃಷಿ ಕ್ಷೇತ್ರದಲ್ಲಿ ಯುವಕರು ಮತ್ತು ಮಹಿಳೆಯರು ಉದ್ಯಮಶೀಲತೆ ಮತ್ತು ನಾವೀನ್ಯತೆ ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹೇಳಿದರು.

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಭಾನುವಾರ ನಡೆದ ಕೃಷಿ ಮೇಳದಲ್ಲಿ ಫಲ-ಪುಷ್ಪ ಪ್ರದರ್ಶನ, ಬೀಜ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೃಷಿ-ಸ್ಟಾರ್ಟ್ಅಪ್‌ಗಳು, ಸಂಸ್ಕರಣಾ ಘಟಕಗಳು, ಕೃಷಿ ಪ್ರವಾಸೋದ್ಯಮ ಮತ್ತು ಸಾವಯವ ಕೃಷಿಯಂತಹ ಕ್ಷೇತ್ರಗಳು ಯುವಕರನ್ನು ಆಕರ್ಷಿಸುತ್ತಿವೆ. ಮಹಿಳೆಯರು ಕೃಷಿಯಲ್ಲಿ ಸಕ್ರಿಯರಾಗಿದ್ದರೆ, ಕುಟುಂಬದ ಆದಾಯ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿಯ ಅಡಿಪಾಯವು ಕೃಷಿಯ ಮೇಲೆ ನಿಂತಿದೆ. ಭಾರತೀಯ ಆರ್ಥಿಕತೆಯಲ್ಲಿ ಕೃಷಿ ವಲಯವು ಪ್ರಮುಖ ಕೊಡುಗೆಯನ್ನು ಹೊಂದಿದೆ. ನಾವು ಸಾಂಪ್ರದಾಯಿಕ ಕೃಷಿಯಿಂದ ಆಧುನಿಕ ಕೃಷಿಯೆಡೆಗೆ ಸಾಗುತ್ತಿದ್ದೇವೆ. ಆದರೂ ಕೆಲವು ಬೆಳೆಗಳಲ್ಲಿ ನಮ್ಮ ಕೃಷಿ ಉತ್ಪಾದಕತೆ ಇನ್ನೂ ಜಾಗತಿಕ ಸರಾಸರಿಗಿಂತ ಕಡಿಮೆಯಾಗಿದೆ. ಭಾರತದಂಥ ದೇಶಕ್ಕೆ ಕೃಷಿ ಉತ್ಪಾದನೆ ಹೆಚ್ಚಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಹೇಳಿದರು.

ಗುಣಮಟ್ಟದ ಬೀಜಗಳು ರೈತರಿಗೆ ತಲುಪಬೇಕಿದೆ. ರೈತರು ಹೊಸ ತಳಿಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸೂಕ್ತವೆನಿಸುವ ತಳಿಗಳನ್ನು ಬೆಳೆಯಲು ಮುಂದಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕುಲಪತಿ ಡಾ.ಪಿ.ಎಲ್. ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಗುಣಮಟ್ಟದ ಬೀಜ ಬಿತ್ತನೆ ಮಾಡಿದರೆ ಶೇ. 20ರಷ್ಟು ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಆದರೆ ಶೇ. 70 ರಷ್ಟು ರೈತರು ತಮ್ಮಲ್ಲಿನ ಬಿತ್ತನೆ ಬೀಜಗಳನ್ನೇ ಕೃಷಿಗೆ ಬಳಸಿಕೊಳ್ಳುತ್ತಾರೆ, ಶೇ. 30 ರಷ್ಟು ರೈತರು ಮಾತ್ರ ದೃಢೀಕೃತ ಬೀಜ ಬಳಸುತ್ತಿದ್ದಾರೆ. ನಮ್ಮ ವಿಶ್ವವಿದ್ಯಾಲಯ ಗುಣಮಟ್ಟದ ಬಿತ್ತನೆ ಬೀಜಗಳನ್ನು ಒದಗಿಸುತ್ತಿದೆ. ಕೃಷಿಮೇಳದಲ್ಲಿ ಸುಮಾರು 1.5 ಕೋಟಿ ರೂ. ಮೌಲ್ಯದ 3500 ಕ್ವಿಂಟಲ್ ಬೀಜ ಮಾರಾಟವಾಗುವ ಸಾಧ್ಯತೆಯಿದೆ ಎಂದರು.

ಒಂದು ಜಿಲ್ಲೆ-ಒಂದು ಉತ್ಪನ್ನ: “ಒಂದು ಜಿಲ್ಲೆ-ಒಂದು ಉತ್ಪನ್ನ” ಯೋಜನೆ ಅನುಷ್ಠಾನಗೊಂಡಿದ್ದು, ಹಣ್ಣುಗಳು ಹಾಗೂ ಹೂವಿನ ಉತ್ಪಾದನೆ ರೈತರನ್ನು ಜಾಗತಿಕ ಮಾರುಕಟ್ಟೆಗೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಹೇಳಿದರು.

ಈ ಮೇಳದಲ್ಲಿ ಪ್ರದರ್ಶಿಸಲಾದ ಹಣ್ಣುಗಳು ಮತ್ತು ಹೂವುಗಳು ನಮ್ಮ ಕೃಷಿ ವೈವಿಧ್ಯತೆಯನ್ನು ಬಿಂಬಿಸುತ್ತವೆ. ಈ ಪ್ರದರ್ಶನದ ಮೂಲಕ, ರೈತರು ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಹಣ್ಣುಗಳು ಮತ್ತು ಹೂವುಗಳನ್ನು ಬೆಳೆದು ಆದಾಯ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ನುಡಿದರು.

ಧಾರವಾಡ ಕೃಷಿ ವಿವಿ ಸಂಶೋಧನಾ ಕಾರ್ಯ ದೇಶಕ್ಕೇ ಸ್ಫೂರ್ತಿದಾಯಕ: ಬೀಜ ಸಂಶೋಧನೆ, ಕೀಟ ಮತ್ತು ರೋಗ ನಿಯಂತ್ರಣ ಮತ್ತು ಕೃಷಿ ಯಂತ್ರಶಾಸ್ತ್ರದಲ್ಲಿ ಧಾರವಾಡ ವಿಶ್ವವಿದ್ಯಾಲಯವು ಮಾಡಿರುವ ಸಂಶೋಧನಾ ಕಾರ್ಯವು ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ಭಾರತಕ್ಕೆ ಸ್ಫೂರ್ತಿದಾಯಕವಾಗಿದೆ ಎಂದು ರಾಜ್ಯಪಾಲರು ಹೇಳಿದರು.

ಕೃಷಿಯಲ್ಲಿ ವಿಜ್ಞಾನ ಮತ್ತು ನಾವೀನ್ಯತೆ ಪ್ರಮುಖ ಪಾತ್ರ ವಹಿಸುತ್ತದೆ. ಕೃಷಿ ಉತ್ಪಾದಕತೆ ಹೆಚ್ಚಿಸಲು ಕೃಷಿಯಲ್ಲಿ ಇತ್ತೀಚಿನ ತಂತ್ರಜ್ಞಾನ, ನೈಸರ್ಗಿಕ ಕೃಷಿ, ಸ್ಥಳೀಯ ಬೀಜಗಳ ಸಂರಕ್ಷಣೆ ಇತ್ಯಾದಿ ವಿಷಯಗಳ ಕುರಿತು ಹೆಚ್ಚು ಸಂಶೋಧನೆ ಮಾಡುವ ಅವಶ್ಯಕತೆಯಿದೆ. ಹವಾಮಾನ ಬದಲಾವಣೆಯಿಂದಾಗಿ ಅಕಾಲಿಕ ಮಳೆ ಅಥವಾ ಬರ, ಕೀಟ ಮತ್ತು ರೋಗಗಳ ಹರಡುವಿಕೆ, ಹೆಚ್ಚಿದ ಉತ್ಪಾದನಾ ವೆಚ್ಚಗಳು, ಮಾರುಕಟ್ಟೆಯಲ್ಲಿ ಬೆಲೆ ಅಸ್ಥಿರತೆಯಂತಹ ಸವಾಲುಗಳನ್ನು ಎದುರಿಸಲು, ನೀರಿನ ಸಂರಕ್ಷಣೆ, ಬೆಳೆ ವೈವಿಧ್ಯೀಕರಣ, ರೈತ ಉತ್ಪಾದಕ ಸಂಸ್ಥೆಗಳು, ಮೌಲ್ಯವರ್ಧನೆ ಮತ್ತು ರಫ್ತಿನ ಕಡೆಗೆ ಕೆಲಸ ಮಾಡುವ ಅವಶ್ಯಕತೆಯಿದೆ ಎಂದು ಹೇಳಿದರು.

NO COMMENTS

LEAVE A REPLY

Please enter your comment!
Please enter your name here

Exit mobile version