ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೆಂಗಳೂರು-ಬೆಳಗಾವಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಚಾಲನೆ ನೀಡಿದ್ದರು. ವಾರದಲ್ಲಿ 6 ದಿನ ಸಂಚಾರ ನಡೆಸುವ ಈ ರೈಲಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಆದರೆ ರೈಲು ವೇಳಾಪಟ್ಟಿ ಬಗ್ಗೆ ಪ್ರಯಾಣಿಕರು ಅಪಸ್ವರ ಎತ್ತಿದ್ದಾರೆ.
ಬೆಂಗಳೂರು-ಬೆಳಗಾವಿ ವೇಳಾಪಟ್ಟಿ ಬಗ್ಗೆ ಜನರು ಮಾತನಾಡಿಲ್ಲ. ಆದರೆ ಬೆಳಗಾವಿ-ಬೆಂಗಳೂರು ನಡುವಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕುತ್ತಿದ್ದಾರೆ.
ಈ ರೈಲು ಕೆಎಸ್ಆರ್ ಬೆಂಗಳೂರು (ಮೆಜೆಸ್ಟಿಕ್) ನಿಲ್ದಾಣದಿಂದ ಹೊರಡಲಿದೆ. ಯಶವಂತಪುರ, ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡದಲ್ಲಿ ನಿಲುಗಡೆ ಹೊಂದಿದೆ.
ಏಕೆ ವೇಳಾಪಟ್ಟಿ ಬದಲು?: ಬೆಳಗಾವಿ-ಕೆಎಸ್ಆರ್ ಬೆಂಗಳೂರು ನಡುವೆ ರೈಲು ಸಂಖ್ಯೆ 26751 ಸಂಚಾರವನ್ನು ನಡೆಸುತ್ತದೆ. ರೈಲು ಬೆಳಗಾವಿಯಿಂದ ಮುಂಜಾನೆ 5.20ಕ್ಕೆ ಹೊರಡುತ್ತದೆ. ಆದ್ದರಿಂದ ಹೊರಡುವ ಸಮಯ ಪರಿಷ್ಕರಣೆ ಮಾಡಬೇಕು ಎಂಬುದು ಬೇಡಿಕೆಯಾಗಿದೆ.
ಬೆಳಗಾವಿ-ಕೆಎಸ್ಆರ್ ಬೆಂಗಳೂರು ರೈಲು ಸಂಖ್ಯೆ 26751 ಬೆಳಗಾವಿಯಿಂದ 5.20ಕ್ಕೆ ಹೊರಟು 7.08/ 7.10 ಧಾರವಾಡ, 7.30/ 7.35 ಹುಬ್ಬಳ್ಳಿ, 8.35/ 8.37 ಹಾವೇರಿ, 9.25/ 9.27 ದಾವಣಗೆರೆ, 12.15/ 12.17 ತುಮಕೂರು, 13.03/ 13.05 ಯಶವಂತಪುರಕ್ಕೆ ಆಗಮನ/ ನಿರ್ಗಮನವಿದೆ.
ಬೆಳಗಾವಿಯಿಂದ ಬೆಳಗ್ಗೆ 5.20ಕ್ಕೆ ರೈಲು ಹತ್ತಲು ಅಕ್ಕಪಕ್ಕದ ಜಿಲ್ಲೆಗಳು, ಗ್ರಾಮಗಳ ಜನರು ಬೆಳಗಾವಿಗೆ ಬರುವುದು ಹೇಗೆ? ಎಂಬುದು ಪ್ರಶ್ನೆಯಾಗಿದೆ. ಆದ್ದರಿಂದ ಬೆಳಗಾವಿಯಿಂದ ರೈಲು ಹೊರಡುವ ಸಮಯ ಬದಲಾವಣೆ ಮಾಡಿ ಎಂದು ಒತ್ತಾಯಿಸಲಾಗುತ್ತಿದೆ.
ವೇಳಾಪಟ್ಟಿ ಬದಲಾವಣೆ ಮಾಡುವ ಕುರಿತು ಜನಪ್ರತಿನಿಧಿಗಳು, ರೈಲ್ವೆ ಇಲಾಖೆ ಅಧಿಕಾರಿಗಳು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ರೈಲು ಬೆಳಗಾವಿಯಿಂದ ಹೊರಡುವ ಸಮಯ ಬದಲಾವಣೆ ಮಾಡಿ ಎಂದು ಒತ್ತಾಯಿಸಲಾಗುತ್ತಿದೆ.
ಬೆಂಗಳೂರು-ಬೆಳಗಾವಿ ನಡುವಿನ ರೈಲು ಕರ್ನಾಟಕದ 11ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಾಗಿದೆ. ಈ ರೈಲಿನ ಮೂಲಕ ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕ ನಡುವೆ ಸಂಪರ್ಕ ಕಲ್ಪಿಸಲು ಮತ್ತೊಂದು ವಂದೇ ಭಾರತ್ ರೈಲು ಸಿಕ್ಕಿದಂತೆ ಆಗಿದೆ.
ಬೆಳಗಾವಿಯಿಂದ ರೈಲು ಮುಂಜಾನೆ 5.20ಕ್ಕೆ ಹೊರಟರೆ ಅಕ್ಕಪಕ್ಕದ ಜಿಲ್ಲೆಗಳು, ಗ್ರಾಮಗಳ ಜನರು ರೈಲು ಹತ್ತಲು ಹಿಂದಿನ ದಿನವೇ ಬೆಳಗಾವಿಗೆ ಬಂದು ಉಳಿದುಕೊಳ್ಳಬೇಕು. ಆದ್ದರಿಂದ ರೈಲಿನ ಸಮಯ ಪರಿಷ್ಕರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ.
ಕೆಎಸ್ಆರ್ ಬೆಂಗಳೂರು-ಬೆಳಗಾವಿ ನಡುವೆ ರೈಲು ಸಂಖ್ಯೆ 26752 ಸಂಚಾರವನ್ನು ನಡೆಸುತ್ತದೆ. ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಮಧ್ಯಾಹ್ನ 14.20 ಹೊರಡು ರೈಲು ಯಶವಂತಪುರ 14.28/ 14.30, ತುಮಕೂರು 15.03/ 15.05, ದಾವಣಗೆರೆ 17.48/ 17.50, ಹಾವೇರಿ 18.48/ 18.50, ಹುಬ್ಬಳ್ಳಿ 20/20.05, ಧಾರವಾಡ 20.25/ 20.27 ಆಗಮನ/ ನಿರ್ಗಮನವಾಗಲಿದ್ದು, ಬೆಳಗಾವಿಗೆ ರಾತ್ರಿ 22.40ಕ್ಕೆ ತಲುಪಲಿದೆ.
ರೈಲು ಬೆಳಗಾವಿಯಿಂದ ಹೊರಡುವ ಸಮಯ ಮತ್ತು ಬೆಳಗಾವಿಗೆ ರಾತ್ರಿ ಆಗಮಿಸುವ ಸಮಯವನ್ನು ಪರಿಷ್ಕರಣೆ ಮಾಡಿದರೆ ಮತ್ತಷ್ಟು ಜನರು ಈ ರೈಲಿನಲ್ಲಿ ಸಂಚಾರ ನಡೆಸಲು ಅನುಕೂಲವಾಗಲಿದೆ ಎಂದು ಜನರು ಒತ್ತಾಯಿಸುತ್ತಿದ್ದಾರೆ.