ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜಾಲ ವಿಸ್ತರಣೆಯಾಗುತ್ತಿದೆ. ಆರ್.ವಿ.ರಸ್ತೆ-ಬೊಮ್ಮಸಂದ್ರ 19.15 ಕಿ.ಮೀ. ಮಾರ್ಗದಲ್ಲಿ ಸೋಮವಾರದಿಂದ ರೈಲು ಸಂಚಾರ ಆರಂಭವಾಗಿದೆ. ಈಗ ಬಿಎಂಆರ್‌ಸಿಎಲ್ ಬೂದು ಮಾರ್ಗದ ಮೆಟ್ರೋ ಕಾಮಗಾರಿಯನ್ನು ಆರಂಭಿಸಲು ಸಿದ್ಧತೆ ನಡೆಸಿದೆ.
ಬೆಂಗಳೂರು ನಗರದ ಮೆಟ್ರೋ ಯೋಜನೆಯ 3ನೇ ಹಂತದಲ್ಲಿ ಬೂದು ಮೆಟ್ರೋ ಮಾರ್ಗ ಬರುತ್ತದೆ. ಇದು ನಮ್ಮ ಮೆಟ್ರೋ ಜಾಲದ ಅತಿ ಚಿಕ್ಕ ಮಾರ್ಗವಾಗಿದೆ. ಈ ಮಾರ್ಗವು ನೇರಳೆ ಮಾರ್ಗದ ಹೊಸಹಳ್ಳಿ ನಿಲ್ದಾಣದಿಂದ ಕಡಬಗೆರೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ.
ಈಗಾಗಲೇ ಯೋಜನೆಗೆ ಅಂತಿಮ ಒಪ್ಪಿಗೆ ಸಿಕ್ಕಿದ್ದು, ಭೂಸ್ವಾಧೀನ ಕೆಲಸ ನಡೆಯುತ್ತಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲೇ ಕೇಂದ್ರ ಸರ್ಕಾರ ಬೂದು ಮೆಟ್ರೋ ಯೋಜನೆ ಕೈಗೆತ್ತಿಕೊಳ್ಳಲು ಒಪ್ಪಿಗೆಯನ್ನು ನೀಡಿದೆ.
ಯೋಜನೆಯ ವಿವರಗಳು: ಹೊಸಹಳ್ಳಿ-ಕಡಬಗೆರೆ ಸಂಪರ್ಕಿಸುವ ಈ ಮಾರ್ಗದಲ್ಲಿ ಮೆಟ್ರೋ ರೈಲಿನ ಸಂಚಾರ 2032ರಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರವು ಬೂದು ಮೆಟ್ರೋ ಯೋಜನೆಗೆ ಒಪ್ಪಿಗೆ ನೀಡಿದ್ದು, ಬಿಎಂಆರ್‌ಸಿಎಲ್ ಕಾಮಗಾರಿ ಕೈಗೆತ್ತಿಕೊಳ್ಳಲಿದೆ.
ಕಾಮಾಕ್ಷಿ ಪಾಳ್ಯ, ಸುಮನಹಳ್ಳಿ, ಸುಂಕದಕಟ್ಟೆ, ಹೇರೋಹಳ್ಳಿ, ಬ್ಯಾಡರಹಳ್ಳಿ ಮೂಲಕ ಈ ಮಾರ್ಗ ಹಾದುಹೋಗಲಿದೆ. ಮಾರ್ಗ ಒಟ್ಟು 12.5 ಕಿ.ಮೀ.ಇದ್ದು, ನಗರದ ಅತಿ ಚಿಕ್ಕ ಮೆಟ್ರೋ ಮಾರ್ಗ ಎನಿಸಿಕೊಳ್ಳಲಿದೆ.
ಸದ್ಯ ನಗರದಲ್ಲಿ ಹಸಿರು, ನೇರಳೆ, ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚರಿಸುತ್ತಿವೆ. ಬೂದು ಮೆಟ್ರೋ ಆರಂಭವಾದಲ್ಲಿ ಸಂಚಾರ ದಟ್ಟಣೆ ಸುಧಾರಿಸಬಹುದಾಗಿದೆ ಎಂದು ಅಂದಾಜಿಸಲಾಗಿದೆ. ಇದಕ್ಕೂ ಮೊದಲು ಏರ್‌ಪೋರ್ಟ್‌ಗೆ ಸಂಪರ್ಕಿಸುವ ಮಾರ್ಗದಲ್ಲಿ ಮೆಟ್ರೋ ರೈಲು ಓಡಲಿದೆ.
ಈಗ ಹಳದಿ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭವಾಗಿದೆ. ಸೋಮವಾರ ಒಂದೇ ದಿನ 85,000 ಪ್ರಯಾಣಿಕರು ಸಂಚಾರವನ್ನು ನಡೆಸಿದ್ದಾರೆ. ಗುಲಾಬಿ ಮಾರ್ಗ ಒಟ್ಟು 2 ಹಂತದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ. 2026ರ ಮಾರ್ಚ್‌ನಲ್ಲಿ, 2026ರ ಸೆಪ್ಟೆಂಬರ್‌ನಲ್ಲಿ ರೈಲು ಸಂಚಾರ ನಿರೀಕ್ಷೆ ಮಾಡಲಾಗಿದೆ.
ತಾವರೆಕೆರೆ, ಕಾಳೇನ ಅಗ್ರಹಾರ, ಬನ್ನೇರುಘಟ್ಟ ರಸ್ತೆಯ ಎತ್ತರಿಸಿದ ಗುಲಾಬಿ ಮಾರ್ಗ ಮೊದಲ ಹಂತದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ. ಬಳಿಕ ಡೈರಿ ಸರ್ಕಲ್, ನಾಗವಾರ, ಎಂಜಿ ರಸ್ತೆ, ಶಿವಾಜಿನಗರ ಬೆಂಗಳೂರು ನಗರದ ಅತಿ ಉದ್ದದ ಸುರಂಗ ಮಾರ್ಗದಲ್ಲಿ ಸಂಚಾರ ಆರಂಭವಾಗಲಿದೆ.
ನಮ್ಮ ಮೆಟ್ರೋ ನೀಲಿ ಮಾರ್ಗ ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗವನ್ನು ಸಹ ಎರಡು ಹಂತದಲ್ಲಿ ಉದ್ಘಾಟನೆ ಮಾಡಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ. ಹೆಬ್ಬಾಳ ಮತ್ತು ಏರ್‌ಪೋರ್ಟ್ ನಡುವಿನ ಕಾಮಗಾರಿ ವೇಗವಾಗಿ ಸಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಭಾನುವಾರ ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದಾರೆ. ಈ ಹಂತವು 2 ಕಾರಿಡಾರ್‌ಗಳನ್ನು ಒಳಗೊಂಡಿದೆ. 44.65 ಕಿ.ಮೀ. ಉದ್ದದ ಮಾರ್ಗದಲ್ಲಿ ಜೆ.ಪಿ.ನಗರ 4ನೇ ಹಂತ, ಕಡಬಗೆರೆ, ಹೊಸಹಳ್ಳಿ, ಮಾಗಡಿ ರೋಡ್ ಸಹ ಸೇರಿದೆ.