ಬೆಳಗಾವಿ (ರಾಮದುರ್ಗ): ಮೂರು ಹೆಣ್ಣು ಮಕ್ಕಳ ಬೆನ್ನಲ್ಲೆ ನಾಲ್ಕನೆಯದೂ ಹೆಣ್ಣು ಮಗುವಾದ ಹಿನ್ನೆಲೆಯಲ್ಲಿ ಮನನೊಂದ ಹೆತ್ತವ್ವಳೇ ತನ್ನ ಮೂರು ದಿನ ಪ್ರಾಯದ ಕರುಳಕುಡಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ದಾರುಣ ಘಟನೆ ರಾಮದುರ್ಗ ತಾಲ್ಲೂಕಿನ ಹಿರೇಮುಲಂಗಿಯಲ್ಲಿ ನಡೆದಿದೆ.
ಅಶ್ವಿನಿ ಹಳಕಟ್ಟಿ ಎಂಬುವಳೇ ಈ ತಾಯಿ. ಈ ಬಾರಿ ಗಂಡುಮಗುವೇ ಹುಟ್ಟುವ ನಿರೀಕ್ಷೆಯಲ್ಲಿದ್ದರು. ಆದರೆ ನ. 23ರಂದು ಮುದಕವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮತ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಾರನೇ ದಿನ ಅಶ್ವಿನಿ ತವರು ಮನೆ ಹಿರೇಮುಲಂಗಿಗೆ ಬಂದಿದ್ದಾರೆ. ಇಂದು ಬೆಳಗ್ಗೆ ತಾಯಿ ಹೊರಹೋದಾಗ ಹಸುಗೂಸಿನ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆಂದು ದೂರಲಾಗಿದೆ.
ನಂತರ ಮಗು ಉಸಿರಾಡುತ್ತಿಲ್ಲ ಎಂಬ ನಾಟಕವಾಡಿ, ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದಾಗ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ ಎಂಬ ಸಂಶಯದಿಂದ ಸ್ಥಳೀಯ ಪೊಲೀಸರಿಗೆ ಆಸ್ಪತ್ರೆ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆಂದು ತಿಳಿದುಬಂದಿದೆ.
ಸ್ಥಳಕ್ಕೆ ಆಗಮಿಸಿದ ಡಿವೈಎಸ್‌ಪಿ ಚಿದಂಬರ ಮಡಿವಾಳರ, ಸುರೇಬಾನ ಪಿಎಸ್‌ಐ ಶಿವಾಜಿ ಪವಾರ ಪ್ರಾಥಮಿಕ ತನಿಖೆ ಕೈಗೊಂಡಾಗ ಘಟನೆಯ ಕುರಿತು ಸಂಶಯ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಅಶ್ವಿನಿ ವಿರುದ್ಧ ಕೇಸ್ ದಾಖಲಾಗಿದ್ದು, ಪೊಲೀಸ್ ಕಾವಲಿನಲ್ಲಿಯೇ ರಾಮದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಆರೈಕೆ ಮಾಡಲಾಗುತ್ತಿದೆ.
