ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ದೇವನಹಳ್ಳಿಯಲ್ಲಿ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ಬಹೃತ್ ಹೋರಾಟ ನಡೆಯುತ್ತಿದೆ. ಸಾಹಿತಿಗಳು, ಸಿನಿಮಾ ತಾರೆಯರು ಹೋರಾಟಕ್ಕೆ ಕೈ ಜೋಡಿಸಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ದೇವನಹಳ್ಳಿಯ ರೈತ ಹೋರಾಟದ ಕುರಿತು ಗುರುವಾರ ಮತ್ತು ಶುಕ್ರವಾರ ಎರಡು ಸಭೆಗಳನ್ನು ಮಾಡಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದು, ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹಾಗೂ ಇತರೆ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆ ವಿಷಯ ಕುರಿತಂತೆ ರೈತ ಹೋರಾಟಗಾರರು, ಸ್ಥಳೀಯ ಮುಖಂಡರು ಹಾಗೂ ಹೋರಾಟ ಒಕ್ಕೂಟಗಳ ಮುಖಂಡರ ಜೊತೆ ನಡೆದ ಸಮಾಲೋಚನಾ ಸಭೆಯನ್ನು ನಡೆಸಿದೆ ಎಂದು ಹೇಳಿದ್ದಾರೆ.
ಸಭೆಯಲ್ಲಿ ನಡೆದ ಚರ್ಚೆಗಳು: ಮುಖ್ಯಮಂತ್ರಿ ಸಿದ್ದರಾಮಯ್ಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವುದಕ್ಕೆ ಸಂಬಂಧಿಸಿದಂತೆ ಕೆಲವು ಕಾನೂನು ತೊಡಕುಗಳಿದ್ದು, ಅದನ್ನು ಸರಿಪಡಿಸಿಕೊಳ್ಳುವ ಸಲಹೆಯನ್ನು ಕಾನೂನು ತಜ್ಞರು ನೀಡಿದ್ದಾರೆ ಎಂದು ಹೇಳಿದ್ದಾರೆ.
ಈಗಾಗಲೇ ಏಪ್ರಿಲ್ ತಿಂಗಳಲ್ಲಿ ಅಂತಿಮ ನೋಟಿಫಿಕೇಶನ್ ಅಗಿರುವ ಕಾರಣ ಅದರ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ 10 ದಿನಗಳ ಕಾಲಾವಕಾಶ ಅಗತ್ಯವಿದೆ. ಈ ಕಾಲಾವಧಿಯಲ್ಲಿ ಸರ್ಕಾರಕ್ಕೆ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಿದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ಕಾನೂನು-ಕಾಯ್ದೆಗೆ ವಿರುದ್ಧವಾಗಿ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ನಿಯಮಾನುಸಾರ ಅಂತಿಮ ನೋಟಿಫಿಕೇಶ್ ಆಗಿರುವ ಕಾರಣ, ಅದರ ಕಾನೂನು ಅಂಶಗಳನ್ನು ಪರಿಶೀಲಿಸುವ ಅಗತ್ಯವಿದೆ. ಈ ಕುರಿತು ಗುರುವಾರ ಪೂರ್ವಭಾವಿ ಸಭೆ ನಡೆಸಿದ್ದೇವೆ.
ಇಂದೇ ಸರ್ಕಾರದ ನಿಲುವು ಪ್ರಕಟಿಸಲು ಸಾಧ್ಯವಿಲ್ಲ. 10 ದಿನಗಳ ಬಳಿಕ ಮತ್ತೆ ಸಭೆ ನಡೆಸಿ ಸರ್ಕಾರದ ನಿಲುವು ಸ್ಪಷ್ಟಪಡಿಸಲಾಗುವುದು. ನಾವು ಪ್ರಜಾಪ್ರಭುತ್ವ ಮತ್ತು ಸಂವಾದದಲ್ಲಿ ನಂಬಿಕೆಯಿಟ್ಟಿರುವವರು. ಪ್ರತಿಭಟನೆಗೆ ಯಾವುದೇ ಅಡ್ಡಿಪಡಿಸಿಲ್ಲ. ನಾನೂ ರೈತ ಸಂಘದಲ್ಲಿದ್ದವನು, ನಮ್ಮ ವಿರುದ್ಧ ಪ್ರತಿಭಟಿಸಿದರೂ ಅದನ್ನು ಹತ್ತಿಕ್ಕುವ ಕೆಲಸ ನಾವು ಮಾಡಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.