ಬಿಹಾರ ಚುನಾವಣಾ ಪೂರ್ವ ಸಮೀಕ್ಷೆ: ಯಾರಿಗೆ ಎಷ್ಟು ಸೀಟು?

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ. ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟದಲ್ಲಿ ಯಾರಿಗೆ ಅಧಿಕಾರ ಸಿಗಲಿದೆ ಎಂದು ಈಗಾಗಲೇ ಲೆಕ್ಕಾಚಾರಗಳು ನಡೆಯುತ್ತಿವೆ.

ಬಿಹಾರ ರಾಜ್ಯದ 243 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. ಬಿಜೆಪಿ ಈಗಾಗಲೇ ಚುನಾವಣೆಗೆ ತಯಾರಿಯನ್ನು ಚುರುಕುಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿ, ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದಾರೆ.

ಬಿಹಾರ ಚುನಾವಣೆ ಕುರಿತು ಚುನಾವಣಾ ಪೂರ್ವ ಸಮೀಕ್ಷೆಗಳು ನಡೆಯುತ್ತಿವೆ. ಗುರುವಾರ ಜನ್‌ಮತ್‌ ಪೋಲ್ಸ್ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

ಚುನಾವಣಾ ಸಮೀಕ್ಷೆಯಂತೆ ಈಗ ಚುನಾವಣೆ ನಡೆದರೆ ಎನ್‌ಡಿಎ 133-136 ಸೀಟು, ಮಹಾಘಟಬಂಧನ್ 97-99 ಸೀಟು, ಜೆಎಸ್‌ಪಿ 3-5 ಸೀಟು ಮತ್ತು ಇತರರು 6-8 ಸೀಟುಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ.

ಒಂದು ವೇಳೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸೀಟುಗಳಿಸಿದೆ ಪಕ್ಷ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಬದಲಾವಣೆ ಮಾಡಿ ಬಿಜೆಪಿ ನಾಯಕರನ್ನು ಸಿಎಂ ಮಾಡಲಿದೆ ಎಂದು ಮಹಾಘಟಬಂಧನ್ ನಾಯಕರು ಟೀಕೆಗಳನ್ನು ಮಾಡುತ್ತಿದ್ದಾರೆ.

ಆರ್‌ಜೆಡಿ, ಕಾಂಗ್ರೆಸ್, ಎಡಪಕ್ಷಗಳು, ವಿಕಾಸಶೀಲ ಇನ್ಸಾನ್ ಪಕ್ಷ ಮಹಾಘಟಬಂಧನ್‌ನಲ್ಲಿವೆ. ಎಲ್ಲರೂ ಒಗ್ಗಟ್ಟಾಗಿ 243 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ. ಬಿಹಾರದ ಅಭಿವೃದ್ಧಿಗೆ ಕಾಂಗ್ರೆಸ್-ಆರ್‌ಜೆಡಿ ಅಡ್ಡಿಯಾಗಿವೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡುವ ಮೂಲಕ ಚುನಾವಣಾ ಕಾವು ಹೆಚ್ಚಿಸುತ್ತಿದ್ದಾರೆ.

ಎನ್‌ಡಿಎ ಮತ್ತು ಮಹಾಘಟಬಂಧನ್ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ನಿರ್ಣಾಯಕವಾಗಿದೆ. ಸದ್ಯದ ಮಾಹಿತಿ ಪ್ರಕಾರ ನಿತೀಶ್ ಕುಮಾರ್‌ರ ಜೆಡಿಯು 102 ಮತ್ತು ಬಿಜೆಪಿ 101 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿವೆ. ಆರ್‌ಜೆಡಿ 140 ಕ್ಷೇತ್ರ ಮತ್ತು 103 ಉಳಿದ ಸ್ಥಾನಗಳಲ್ಲಿ ವಿವಿಧ ಪಕ್ಷಗಳು ಸ್ಪರ್ಧೆ ಮಾಡಲಿವೆ.