ತಮಿಳುನಾಡು ರಾಜಕೀಯ: ಟಿವಿಕೆ ಪಕ್ಷದ ಸಿಎಂ ಅಭ್ಯರ್ಥಿ ಘೋಷಣೆ

ಚೆನ್ನೈ: ತಮಿಳು ನಟ, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ. 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಈಗಾಗಲೇ ಟಿವಿಕೆ ಪಕ್ಷದ ಮೂಲಕ ರಾಜ್ಯ ರಾಕೀಯದಲ್ಲಿ ಸಕ್ರಿಯವಾಗಿರುವ ನಟ ವಿಜಯ್ ಮೇಲೆ ಅಪಾರವಾದ ನಿರೀಕ್ಷೆ ಇದೆ. ವಿಧಾನಸಭೆ ಚುನಾವಣೆ ಮೇಲೆ ಅವರು ಯಾವ ರೀತಿ ಪರಿಣಾಮ ಬೀರಲಿದ್ದಾರೆ? ಎಂದು ಜನರು ಕಾದು ಕುಳಿತಿದ್ದಾರೆ.

ಶುಕ್ರವಾರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ವಿಜಯ್ ಎಂದು ಘೋಷಣೆ ಮಾಡಲಾಗಿದೆ. ಈ ಘೋಷಣೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಉಂಟು ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿಯೂ ಚರ್ಚೆಗಳು ಆರಂಭವಾಗಿದೆ.

ಮುಖ್ಯಮಂತ್ರಿ ಅಭ್ಯರ್ಥಿ ಜೊತೆಗೆ ಮತ್ತೊಂದು ಬಹುದೊಡ್ಡ ಘೋಷಣೆಯನ್ನು ಟಿವಿಕೆ ಪಕ್ಷ ಮಾಡಿದೆ. ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಅಥವ ಬಿಜೆಪಿ ಜೊತೆ ಯಾವುದೇ ಮೈತ್ರಿ ಇಲ್ಲ ಎಂದು ಹೇಳಿದೆ. ಸದ್ಯ ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರವಿದ್ದು, ಎಂ. ಕೆ. ಸ್ಟಾಲಿನ್ ಮುಖ್ಯಮಂತ್ರಿ.

ಇಂದು ನಡೆದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ವಿಶೇಷ ಕಾರ್ಯಕಾರಣಿ ಸಭೆಯಲ್ಲಿ ಈ ಎರಡು ಪ್ರಮುಖ ತೀರ್ಮಾನಗಳನ್ನು ಒಮ್ಮತದಿಂದ ಕೈಗೊಂಡು ಘೋಷಣೆ ಮಾಡಲಾಗಿದೆ. ಮುಂದಿನ ತಿಂಗಳಿನಲ್ಲಿ ಪಕ್ಷದ ರಾಜ್ಯ ಕಾರ್ಯಕಾರಣಿ ಸಭೆಯನ್ನು ದೊಡ್ಡ ಮಟ್ಟದಲ್ಲಿ ನಡೆಸಲಾಗುತ್ತದೆ ಎಂದು ಪಕ್ಷ ಹೇಳಿದೆ.

ಚೆನ್ನೈನಲ್ಲಿ ವಿಜಯ್ ಅಧ್ಯಕ್ಷತೆಯಲ್ಲಿ ಟಿವಿಕೆ ಪಕ್ಷದ ಮಹತ್ವದ ಸಭೆ ಇಂದು ನಡೆಯಿತು. ಈ ಸಭೆಯ ತೀರ್ಮಾನ ಏನಾಗಿರಬಹುದು ಎಂಬುದು 2026ರ ಚುನಾವಣೆ ಹಿನ್ನಲೆಯಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು.

ತಮಿಳುನಾಡಿನ ಮೇಲೆ ಹಿಂದಿ, ಸಂಸ್ಕೃತ ಭಾಷೆಯ ಹೇರಿಕೆಯನ್ನು ಪಕ್ಷ ಖಂಡಿಸುತ್ತದೆ ಎಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚಿನ ಹೇಳಿಕೆಯನ್ನು ಸಹ ಖಂಡಿಸಲಾಯಿತು.

ನಟ ವಿಜಯ್ ನೇತೃತ್ವದಲ್ಲಿಯೇ 2026ರ ವಿಧಾನಸಭೆ ಚುನಾವಣೆಯನ್ನು ಎದುರಿಸಲಾಗುತ್ತದೆ ಎಂದು ಪಕ್ಷದ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ. ಬಿಜೆಪಿಯ ಕೆ. ಅಣ್ಣಾಮಲೈ, ಡಿಎಂಕೆಯ ಸ್ಟಾಲಿನ್ ಮತ್ತು ಟಿವಿಕೆಯ ವಿಜಯ್ ನಡುವೆ ಚುನಾವಣೆಯಲ್ಲಿ ಭಾರೀ ಪೈಪೋಟಿ ನಿರೀಕ್ಷೆ ಮಾಡಲಾಗಿದೆ.