ವಿಜಯನಗರ: ಕಾರಿಗೆ ಲಾರಿ ಡಿಕ್ಕಿಯಾಗಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಮಕ್ಕಳಿಗೆ ತೀವ್ರ ಗಾಯವಾದ ಘಟನೆ ನಡೆದಿದೆ.
ಮರಿಯಮ್ಮನಹಳ್ಳಿ ಪಟ್ಟಣದ ಹೊರವಲಯದ ಕೆಪಿಟಿಸಿಎಲ್ ಕಚೇರಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ಈ ಘಟನೆ ನಡೆದಿದ್ದು, ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಹಳ್ಳಿಯ ಬಳಿ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ದಂಪತಿ ಮೃತಪಟ್ಟಿದ್ದು, ಅವರ ಮೂವರು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಚೆಟ್ನಿಹಾಳು ಗ್ರಾಮದ ಕ್ಯಾಬ್ ಚಾಲಕ ಮುತ್ತಪ್ಪ ಪೂಜಾರ್ (35), ಅವರ ಪತ್ನಿ ರೇಣುಕಾ (30) ಮೃತರು ಅವರ ಮಕ್ಕಳಾದ ಅನುಶ್ರೀ (9), ರೂಪಶ್ರೀ (6) ಹಾಗೂ ಖುಷಿ (4) ಗಂಭೀರ ಗಾಯಗೊಂಡಿದ್ದಾರೆ, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ರವಾನೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮುತ್ತಪ್ಪ, ಮೊಹರಂ ಹಬ್ಬದ ಪ್ರಯುಕ್ತ ತಮ್ಮ ಸ್ವಗ್ರಾಮ ಚೆಟ್ನಿಹಾಳು ಗ್ರಾಮಕ್ಕೆ ಕುಟುಂಬದೊಂದಿಗೆ ತೆರಳುತ್ತಿದ್ದರು, ಅಪಘಾತದ ರಘಸಕ್ಕೆ ಲಾರಿ ಕಾರನ್ನು ಸುಮಾರು ಅರ್ಧ ಕಿಲೋಮೀಟರ್‌ಗೂ ಹೆಚ್ಚು ದೂರ ತಳ್ಳಿಕೊಂಡು ಹೋಗಿದ್ದು, ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ವಿಜಯನಗರ ಎಸ್ಪಿ ಡಾ. ಶ್ರೀಹರಿಬಾಬು ಬಿ.ಎಲ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಮರಿಯಮ್ಮನಹಳ್ಳಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.