ವಿಶಾಖಪಟ್ಟಣಂ: ಈ ಬಾರಿ `ಒಂದು ಭೂಮಿ, ಎಲ್ಲರ ಆರೋಗ್ಯಕ್ಕಾಗಿ ಯೋಗ’ ಎನ್ನುವ ಘೋಷವಾಕ್ಯದೊಂದಿಗೆ ೧೧ನೇ ಯೋಗ ದಿನಾಚರಣೆಯ ಪ್ರಮುಖ ಕಾರ್ಯಕ್ರಮ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಇದರಲ್ಲಿ ಭಾಗವಹಿಸಲಿದ್ದು, ೫ ಲಕ್ಷ ಜನರ ಜತೆ ಯೋಗ ಮಾಡಲಿದ್ದಾರೆ. ಆಯುಷ್ ಇಲಾಖೆಯ ಸಹಕಾರದೊಂದಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಚಂದ್ರಬಾಬು ನಾಯ್ಡು, ಕೇಂದ್ರ ಸಚಿವ ಪ್ರತಾಪರಾವ್ ಜಾಧವ್ ಕೂಡ ಪಾಲ್ಗೊಳ್ಳಲಿದ್ದಾರೆ.
ಇದಕ್ಕಾಗಿ ಆರ್.ಕೆ.ಬೀಚ್‌ನ ೨೬ ಕಿ.ಮೀ. ಉದ್ದದ ಜಾಗದಲ್ಲಿ ಕಾರ್ಯಕ್ರಮ ಏರ್ಪಡಿಸ ಲಾಗಿದೆ. ಬೆಳಗ್ಗೆ ೬.೩೦ರಿಂದ ೭.೪೫ರವರೆಗೆ ಕಾರ್ಯಕ್ರಮ ನಡೆಯಲಿದೆ. ಒಂದೇ ಅವಧಿಯಲ್ಲಿ ಒಂದೇ ಕಡೆ ಇಷ್ಟೊಂದು ಜನ ಒಟ್ಟಿಗೆ ಯೋಗಾಸನ ಮಾಡುವುದು ಗಿನ್ನಿಸ್ ದಾಖಲೆಯಾಗಲಿದೆ. ಪ್ರತಿ ಕಿಲೋ ಮೀಟರ್‌ಗೆ ಒಂದರಂತೆ ವೈದ್ಯಕೀಯ ಕೇಂದ್ರಗಳನ್ನು ತೆರೆಯಲಾಗಿದೆ. ೯,೫೦೦ ಪೊಲೀಸ್ ಸಿಬ್ಬಂದಿಯಿಂದ ಬಿಗಿ ಭದ್ರತೆ ಏರ್ಪಡಿಸಲಾಗಿದೆ.