ಬೆಂಗಳೂರು: ‘ಪ್ರಗತಿ ಪಥದ ಮುಂದಣ ಹೆಜ್ಜೆ’ ಎಂಬ ಕಿರುಪುಸ್ತಕವನ್ನು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಬಿಡುಗಡೆಗೊಳಿಸಿದ್ದಾರೆ.
ಪ್ರಗತಿಯ ಪಥದಲ್ಲಿ ಕೈಗಾರಿಕಾ ಕರ್ನಾಟಕಕ್ಕೆ ನಾವೀನ್ಯತೆ, ಹೂಡಿಕೆ, ಉದ್ಯೋಗದ ಬಲವಾದ ಅಡಿಪಾಯವಾಗಿದ್ದು, ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡು ಎರಡು ವರ್ಷಗಳು ಕಳೆದಿವೆ.— ಇದು ಉದ್ದೇಶ ಮತ್ತು ಪ್ರಗತಿಯಿಂದ ರೂಪಿತವಾದ ಒಂದು ಪಯಣ. ಈ ಮೈಲಿಗಲ್ಲನ್ನು ಗುರುತಿಸಲು, ‘ಪ್ರಗತಿ ಪಥದ ಮುಂದಣ ಹೆಜ್ಜೆ’ ಎಂಬ ಕಿರುಪುಸ್ತಕ ಹಂಚಿಕೊಳ್ಳಲು ಹೆಮ್ಮೆ ಎನಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೃಢ ನಾಯಕತ್ವದಡಿ ನಾವು ಎಷ್ಟು ದೂರ ಸಾಗಿದ್ದೇವೆ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ. ಜೊತೆಗೆ ಮುಂದಿನ ಹಾದಿಗೆ ಮಾರ್ಗದರ್ಶನ ನೀಡುವ ದೃಷ್ಟಿಕೋನವನ್ನೂ ಒದಗಿಸುತ್ತದೆ. ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕವು ಧೈರ್ಯದ ಹೆಜ್ಜೆ ಇಟ್ಟಿದೆ — ದಾಖಲೆಮಟ್ಟದ ಹೂಡಿಕೆಗಳನ್ನು ಆಕರ್ಷಿಸಿ, ಉದ್ಯೋಗ ಸೃಷ್ಟಿಸಿ, ನಾವೀನ್ಯತೆಗೆ ಪ್ರಾಧಾನ್ಯವಿರುವ ಕೈಗಾರಿಕಾ ಪರಿಸರ ವ್ಯವಸ್ಥೆಗೆ ಬಲವಾದ ಅಡಿಪಾಯ ಹಾಕಿದೆ ಎಂದಿದ್ದಾರೆ. ರಾಜ್ಯದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ 6 ಲಕ್ಷದ 57 ಸಾವಿರದ 660 ಕೋಟಿ ರೂಪಾಯಿ ಮೊತ್ತದ ಹೂಡಿಕೆಯ 115 ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ. ಇದರಿಂದ 2 ಲಕ್ಷದ 32 ಸಾವಿರದ 771 ಮಂದಿಗೆ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ. ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಗಳಲ್ಲಿ 906 ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಇದರಿಂದ ಒಂದು ಲಕ್ಷದ 13 ಸಾವಿರದ 200 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 2 ಲಕ್ಷದ 23 ಸಾವಿರದ 982 ಮಂದಿಗೆ ಉದ್ಯೋಗ ಲಭ್ಯವಾಗಲಿದೆ ಎಂದರು.