ಕೊಪ್ಪಳ: ಕಾಂತರಾಜು ವರದಿ ಇತ್ತು. ಅದು ಗಣತಿ ಮಾಡಿ, ೧೦ ವರ್ಷಕ್ಕಿಂತಲೂ ಹೆಚ್ಚಾಗಿದೆ. ಕಾರಣ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಮರುಗಣತಿ ಮಾಡಿಸುತ್ತಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಕೇವಲ ಜಾತಿಗಣತಿ ಮಾಡುತ್ತಿಲ್ಲ. ಸಾಮಾಜಿಕ, ಶೈಕ್ಷಣಿಕ ಮತ್ತುಆರ್ಥಿಕಗಣತಿ ಮಾಡುತ್ತೇವೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಎನ್ನುವ ಅಂಶಗಳು ಹಿಂದುಳಿಯುವಿಕೆಗೆ ಮಹತ್ವದ ಮಾನದಂಡಗಳಾಗಿವೆ. ತಪ್ಪು ಕಲ್ಪನೆಯಲ್ಲಿ ಮಾತನಾಡುತ್ತಿದ್ದಾರೆ. ಅವರು ವಾಸ್ತವಿಕ ಅಂಶ ಅರ್ಥಮಾಡಿಕೊಳ್ಳಬೇಕು. ಕಾಂತರಾಜು ವರದಿ ಇತ್ತು. ಈ ಗಣತಿ ಮಾಡಿ, ೧೦ ವರ್ಷಕ್ಕಿಂತಲೂ ಹೆಚ್ಚಾಗಿದೆ. ೧೦ ವರ್ಷಗಳ ಹಿಂದಿನ ಅಂಕಿ-ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಹಾಗಾಗಿ ಕಾನೂನು ಪ್ರಕಾರ ಹೊಸದಾಗಿ ಗಣತಿ ಮಾಡುತ್ತಿದ್ದೇವೆ. ಈ ಕುರಿತ ಸಂಪುಟ ಸಭೆಯಲ್ಲಿ ಪರ-ವಿರೋಧ ಚರ್ಚೆ ಆಗಿಲ್ಲ. ಎಲ್ಲರೂ ಸೇರಿ ಗಂಭೀರವಾಗಿ ಚರ್ಚಿಸಿ, ಒಮ್ಮತದಿಂದ ಮರುಗಣತಿಯ ನಿರ್ಣಯ ಕೈಗೊಂಡಿದ್ದೇವೆ. ಕೇಂದ್ರ ಸರ್ಕಾರ ಜಾತಿಗಣತಿ ಮಾಡುತ್ತೇವೆ ಎಂದಾಗ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಗಣತಿಯನ್ನೂ ಮಾಡಿ ಎಂದು ನಿರ್ಣಯಿಸಲಾಯಿತು. ಇದಕ್ಕೆ ಈವರೆಗೂ ಕೇಂದ್ರ ಸರ್ಕಾರ ಒಪ್ಪಿಗೆ ಕೊಡಲಿಲ್ಲ ಎಂದರು.