ಹೇಮಾವತಿ ಎಕ್ಸಪ್ರೆಸ್ ಲಿಂಕ್ ಕೆನಾಲ್ ಪೀಡರ್ ಯೋಜನೆ ನಿಲ್ಲಿಸಿ

ತುಮಕೂರು: ಹೇಮಾವತಿ ಎಕ್ಸಪ್ರೆಸ್ ಲಿಂಕ್ ಕೆನಾಲ್ ಪೀಡರ್ ಯೋಜನೆಯಿಂದ ತುಮಕೂರು ಭಾಗದ ರೈತರಿಗೆ ಅನ್ಯಾಯವಾಗಲಿದ್ದು ಈ ಯೋಜನೆಯ ಕಾಮಗಾರಿಯನ್ನು ತಕ್ಷಣ ನಿಲ್ಲಿಸುವಂತೆ ಮುಖ್ಯಮಂತ್ರಿಗಳಿಗೆ ಕೇಂದ್ರ ರೇಲ್ವೆ ಮತ್ತು ಜಲ ಶಕ್ತಿ ರಾಜ್ಯ ಖಾತೆಯ ವಿ. ಸೋಮಣ್ಣ ಪತ್ರ ಬರೆದಿದ್ದಾರೆ.

ವೈಜ್ಞಾನಿಕವಾಗಿ ಅದ್ಯಯನಗೊಂಡ ಮೂಲ ಯೋಜನೆ ಹಾಗೂ ಅನುಮೋದಿತ ಡಿ.ಪಿ.ಆರ್. ವರದಿಯಂತೆ ತುಮಕೂರು ಶಾಖಾ ಕಾಲುವೆ ಕಿ.ಮಿ.70.36ರಲ್ಲಿ ನೀರಿನ ಹರಿವು ಒಟ್ಟು ಸುಮಾರು 1289 ಕ್ಯೂಸೆಕ್ಸ್. ಈ ಪೈಕಿ ತುರುವೆಕೆರೆ, ಗುಬ್ಬಿ, ತುಮಕೂರು ಹಾಗೂ ತುಮಕೂರು ಗ್ರಾಮಾಂತರ ಪ್ರದೇಶಗಳ 96ಕಿ.ಮಿ.ಉದ್ದದ ಈ ಭಾಗಕ್ಕೆ 901 ಕ್ಯೂಸೆಕ್ಸ್ ನೀರಿನ ಹರಿವು ಹಂಚಿಕೆಯಾಗಿದೆ. ಅಲ್ಲದೇ ಕುಣಿಗಲ್ ತಾಲ್ಲೂಕಿಗೆ 388 ಕ್ಯೂಸೆಕ್ಸ್ ನೀರು ಹಂಚಿಕೆಯಾಗಿರುತ್ತದೆ. ಈ ಯೋಜನೆಯಲ್ಲಿ ಲಭ್ಯವಿರುವ ಸಂಪೂರ್ಣ ನೀರನ್ನು ಈಗಾಗಲೇ ಹಂಚಿಕೆ ಮಾಡಲಾಗಿದ್ದು, ಪ್ರಸ್ತಾವಿತ ಯೋಜನೆಯ ಮೂಲಕ ಇತರ ಪ್ರದೇಶಕ್ಕೆ ನೀರು ಸರಬರಾಜು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಹೇಮಾವತಿ ಎಕ್ಸಪ್ರೆಸ್ ಲಿಂಕ್ ಕೆನಾಲ್ ಪೀಡರ್ ಯೋಜನೆ ತುಮಕೂರಿನ ಜಿಲ್ಲೆಯ ನಾಲ್ಕು ತಾಲ್ಲೂಕಿಗೆ ಹಂಚಿಕೆಯಾದ 901 ಕ್ಯೂಸೆಕ್ಸ್ ನೀರಿನ ಹರಿವೆಗೆ ದಕ್ಕೆ ತಂದು ರಾಜ್ಯದ ನೀರಾವರಿ ಸಚಿವರು ತವರು ಜಿಲ್ಲೆಗೆ ನೀರು ಹರಿಸುವ ಅವೈಜ್ಷಾನಿಕ ಕಾರ್ಯಯೋಜನೆ ಇದಾಗಿದೆ. ಕರ್ನಾಟಕ ಸರ್ಕಾರ ಅವೈಜ್ಞಾ ನಿಕವಾಗಿ ಹೊರತರುತ್ತಿರುವ ಹೇಮಾವತಿ ಎಕ್ಸಪ್ರೆಸ್ ಲಿಂಕ್ ಕೆನಾಲ್ ಪೀಡರ್ ಯೋಜನೆಯು ತುಮಕೂರು ಜಿಲ್ಲೆಯ ತುರುವೆಕೆರೆ, ಗುಬ್ಬಿ, ತುಮಕೂರು (ಗ್ರಾಮಾಂತರ) ಹಾಗೂ ತುಮಕೂರು (ನಗರ) ಭಾಗದ ಜನ ಸಾಮಾನ್ಯರ ಹಾಗೂ ಜಿಲ್ಲೆಯ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಲಿದೆ. ಈ ಕೆನಾಲ್ ನಿರ್ಮಾಣದಿಂದ ಹೈಡ್ರಾಲಿಕ್ ಹೆಡ್ ಕುಸಿದು ಸಕಾಲದಲ್ಲಿ ನೀರು ಪೂರೈಕೆಯಲ್ಲಿ ಕೊರತೆಯಾಗುವ ಆತಂಕವನ್ನು ಈ ಭಾಗದ ರೈತರು ಹಾಗೂ ತಾಂತ್ರಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತುಮಕೂರು ಜಿಲ್ಲೆಯ ಅವಿಭಾಜ್ಯ ಅಂಗವಾದ ಕುಣಿಗಲ್ ಭಾಗಕ್ಕೆ ಹಂಚಿಕೆಯಾದ ನೀರಿನ ಹರಿವಿಗೆ ದಕ್ಕೆ ತಂದು ಈ ಭಾಗದ ರೈತರಿಗೂ ಅನ್ಯಾಯ ಉಂಟು ಮಾಡುವ ರಾಜ್ಯ ಸರ್ಕಾರದ ಈ ಕ್ರಮ ಅಸಂಬದ್ದವಾಗಿದೆ.ಮಾಗಡಿ, ರಾಮನಗರ ಮತ್ತು ಕನಕಪುರ ಭಾಗಕ್ಕೆ ಮಂಚನಬೆಲೆ ಮತ್ತು ತಿಪ್ಪಗೊಂಡಹಳ್ಳಿ ಜಲಾಶಯಗಳ ಮೂಲಕ ಸಾಕಷ್ಟು ನೀರು ಕಲ್ಪಿಸುವುದಕ್ಕೆ ಅವಕಾಶ ಇದ್ದಾಗ್ಯೂ ಸಹ ತುಮಕೂರಿನ ಭಾಗದ ಜನರನ್ನು ಅನಾವಶ್ಯಕವಾಗಿ ಗೊಂದಲಕ್ಕೆ ಒಳಪಡಿಸುವುದು ಎಷ್ಟರ ಮಟ್ಟಿಗೆ ಸರಿ? ಯಾವ ಕಾರಣಕ್ಕೂ ತುಮಕೂರಿನ ಜಿಲ್ಲೆಯಲ್ಲಿನ ಸಮನ್ವಯತೆಯನ್ನು ಮತ್ತು ಜನಸಾಮಾನ್ಯರ ಸಹನೆಯನ್ನು ಕೆದಕುವ ಕಾರ್ಯತಂತ್ರದ ಯೋಜನೆ ಇದಾಗಬಾರದು. ಈ ಯೋಜನೆಯ ಸಾಧಕ-ಭಾದಕ ಅಧ್ಯ ಯನ ಮಾಡದೇ ಸರ್ಕಾರ ತರಾತುರಿಯಲ್ಲಿ ಏಕಪಕ್ಷೀಯವಾಗಿ ತೆಗೆದುಕೊಂಡ ನಿರ್ಧಾರ ಖಂಡನೀಯವಾದದು. ಜನಸಾಮಾನ್ಯರು, ರೈತರು ಮತ್ತು ಬುದ್ದಿ ಜೀವಿಗಳು ಈ ಯೋಜನೆಯ ವಿರುದ್ದ ಬೀದಿಗಿಳಿದು ಬಹಿಷ್ಕಾರ ಹಾಕುವ ಮುನ್ನವೇ, ಮುಖ್ಯ ಮಂತ್ರಿಗಳು ಕೂಡಲೆ ಮಧ್ಯಪ್ರವೇಶಿಸಿ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.
ಅವೈಜ್ಞಾನಿಕ ಯೋಜನೆ ಕೈಗೆತ್ತಿಗೊಂಡು ಕಾಮಗಾರಿ ಪ್ರಾರಂಭಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ತುಮಕೂರಿನ ರೈತರ ನೆಮ್ಮದಿ ಕೆಡಿಸುವ ಈ ಯೋಜನೆಯ ಕಾಮಾಗಾರಿಯನ್ನು ಕೂಡಲೇ ನಿಲ್ಲಿಸಿ. ಈ ಬಗ್ಗೆ ಕೂಡಲೇ ಕ್ರಮ ಜರುಗಿಸಿ ರಾಜ್ಯ ಸರ್ಕಾರದ ತೀರ್ಮಾನವನ್ನು ಮೇ 31 ರೊಳಗೆ ಪ್ರಕಟಿಸುವಂತೆ ಮುಖ್ಯಮಂತ್ರಿಗಳಲ್ಲಿ ಸಚಿವರು ಮನವಿ ಮಾಡಿದ್ದಾರೆ.