ಹುಬ್ಬಳ್ಳಿ-ಸೊಲ್ಲಾಪುರಕ್ಕೆ ಇನ್ನು ಮುಂದೆ ಚತುಷ್ಪಥ ರಸ್ತೆ..!

ಅಭಯ ಮನಗೂಳಿ
ಬಾಗಲಕೋಟೆ: ಹುಬ್ಬಳ್ಳಿ-ಸೊಲ್ಲಾಪುರ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥವಾಗಿ ವಿಸ್ತರಿಸಲು ಕೇಂದ್ರ ಸರ್ಕಾರ ಮನಸ್ಸು ಮಾಡಿದೆ. ಈ ಮೂಲಕ ಸಂಚಾರ ದಟ್ಟಣೆಯ ಸಮಸ್ಯೆಗೆ ಪರಿಹಾರ ಸಿಗುವ ಭರವಸೆ ಮೂಡಿದೆ.
ಈ ಕುರಿತಾಗಿ ಶೀಘ್ರದಲ್ಲಿ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾರ್ಯದರ್ಶಿಗಳ ನೇತೃತ್ವದಲ್ಲಿ ಜರುಗಿದ ೨೦೨೫-೨೬ನೇ ಸಾಲಿನ ಕಾರ್ಯಯೋಜನಾ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ೨೦೨೮ರೊಳಗಾಗಿ ಚತುಷ್ಪಥ ರಸ್ತೆಯನ್ನು ವಿಸ್ತರಿಸುವ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಹುಬ್ಬಳ್ಳಿ-ಸೊಲ್ಲಾಪುರ ೨೯೬ ಕಿ.ಮೀ. ಅಂತರವಿದ್ದು, ವಿಜಯಪುರದಿಂದ- ಹುಬ್ಬಳ್ಳಿ ವರೆಗೆ ೧೮೬ ಕಿ.ಮೀ. ಆಗಲಿದೆ. ವಿಜಯಪುರದಿಂದ ಹುಬ್ಬಳ್ಳಿವರೆಗೂ ರಸ್ತೆಯನ್ನು ಚತುಷ್ಪಥವನ್ನಾಗಿಸಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಡಿಪಿಆರ್ ಸಿದ್ಧಪಡಿಸಲು ಸದ್ಯದಲ್ಲೇ ಟೆಂಡರ್ ಕರೆಯಲಾಗುತ್ತದೆ. ಡಿಪಿಆರ್ ಸಿದ್ಧಗೊಂಡ ನಂತರ ಕಾಮಗಾರಿಗೆ ಚಾಲನೆ ಸಿಗಲಿದೆ.
ಹುಬ್ಬಳ್ಳಿಯಿಂದ ವಿಜಯಪುರದವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥವನ್ನಾಗಿಸಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ, ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹಾಗೂ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರು ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದರು.
ಹುಬ್ಬಳ್ಳಿ-ಸೊಲ್ಲಾಪುರ ಸಂಪರ್ಕಿಸುವ ಮಾರ್ಗದಲ್ಲಿ ಗದ್ದನಕೇರಿ ಕ್ರಾಸ್ ಅತೀ ಪ್ರಮುಖ ಜಂಕ್ಷನ್ ಆಗಿದೆ. ಜಂಕ್ಷನ್ ಕಿರಿದಾಗಿದ್ದು, ಭಾರೀ ಗಾತ್ರದ ವಾಹನ ಸೇರಿ ನಿತ್ಯವೂ ಸಾವಿರಾರು ವಾಹನಗಳು ಓಡಾಡುವುದರಿಂದ ಇಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ವಿಐಪಿಗಳ ಓಡಾಟಯಿಂದ ಹಿಡಿದು ಕೊಂಚವೇ ಜಾಮ್ ಆದರೂ ಕಿ.ಮೀಗಟ್ಟಲೇ ವಾಹನಗಳು ನಿಲ್ಲುವ ಸ್ಥಿತಿಯಿದೆ. ಇಲ್ಲಿ ಫ್ಲೈಓವರ್ ನಿರ್ಮಿಸುವ ಸಲಹೆಯನ್ನೂ ಒಪ್ಪಿಕೊಂಡಿದೆ. ಅಲ್ಲದೇ ಕೊಲ್ಹಾರ ಬಳಿಯಿರುವ ಬೃಹದಾಕಾರದ ಸೇತುವೆಯನ್ನೂ ಒಳಗೊಂಡು ರಸ್ತೆ ವಿಸ್ತರಿಸುವ ಗುರಿಯಿದ್ದು, ಡಿಪಿಆರ್ ನಂತರವೇ ಸ್ಪಷ್ಟ ಚಿತ್ರಣ ಸಿಗಲಿದೆ.

6 ಯೋಜನೆಗಳಿಗೆ ಡಿಪಿಆರ್
ಹುಬ್ಬಳ್ಳಿಯಿಂದ ವಿಜಯಪುರವರೆಗೆ ರಸ್ತೆ ವಿಸ್ತರಿಸುವ ಕಾಮಗಾರಿ ಮಾತ್ರವಲ್ಲದೇ ಯಾದಗಿರಿ ಜಿಲ್ಲೆ ಹತ್ತಿಗುಡೂರ ತಿಂತಣಿ ಬಳಿ ೩೯ ಕಿ.ಮೀ ರಸ್ತೆ ದ್ವಿಪಥ ರಸ್ತೆ ವಿಸ್ತರಣೆ, ಕಲಬುರಗಿ, ವಾಡಿ, ಯಾದಗಿರಿ, ಕಡೆಊರ ೧೮೮ ಕಿ.ಮೀ. ರಸ್ತೆ ಚತುಷ್ಪಥ ವಿಸ್ತರಣೆ, ಪಾಂಡವಪುರ ಬಳಿ ಬೈಪಾಸ್ ರಸ್ತೆ, ಶಿವಮೊಗ್ಗ ಮಂಗಳೂರು ರಸ್ತೆಯಲ್ಲಿ ೨೩ ಕಿ.ಮೀ ಚತುಷ್ಪಥ ರಸ್ತೆ ವಿಸ್ತರಣೆ, ೧೨ ಕಿ.ಮೀ ಸಿರಗುಪ್ಪ ಬೈಪಾಸ್ ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ.