ಹುಬ್ಬಳ್ಳಿಯಿಂದ ಹಾರಾಟ ನಡೆಸಲಿವೆ ಮತ್ತಷ್ಟು ವಿಮಾನಗಳು

ಹುಬ್ಬಳ್ಳಿ: ಹುಬ್ಬಳ್ಳಿ ಉತ್ತರ ಕರ್ನಾಟಕದ ಹೆಬ್ಬಾಗಿಲು. ಇಲ್ಲಿರುವ ವಿಮಾನ ನಿಲ್ದಾಣದಿಂದ ದೇಶದ ವಿವಿಧ ನಗರಗಳಿಗೆ ವಿಮಾನ ಸಂಪರ್ಕವಿದೆ. ಪ್ರತಿದಿನ ಸುಮಾರು 6 ವಿಮಾನಗಳು ನಗರದಿಂದ ಹಾರಾಟವನ್ನು ನಡೆಸುತ್ತವೆ. ಈಗ ಇನ್ನಷ್ಟು ವಿಮಾನ ಸೇವೆಯನ್ನು ಆರಂಭಿಸಲು ಪ್ರಯತ್ನಗಳು ನಡೆದಿವೆ.

ಪ್ರಸ್ತುತ ಹುಬ್ಬಳ್ಳಿಯಿಂದ ಬೆಂಗಳೂರು, ಮುಂಬೈ, ಹೈದರಾಬಾದ್, ಪುಣೆ ಸೇರಿದಂತೆ ವಿವಿಧ ನಗರಕ್ಕೆ ವಿಮಾನ ಸಂಪರ್ಕವಿದೆ. ಉತ್ತರ ಕರ್ನಾಟಕ ಭಾಗಕ್ಕೆ ಇನ್ನಷ್ಟು ವಿಮಾನ ಸೌಲಭ್ಯಗಳು ಬೇಕು ಎಂದು ಬೇಡಿಕೆಯನ್ನು ಸಹ ಸಲ್ಲಿಸಲಾಗುತ್ತಿದೆ.

ಗುರುವಾರ ಹುಬ್ಬಳ್ಳಿ ವಿಮಾನ ನಿಲ್ದಾಣದ ಸಾಮಾಜಿಕ ಜಾಲತಾಣದ ಪೇಜ್‌ನಲ್ಲಿ ಹೊಸ ವಿಮಾನಗಳ ಸೇವೆಯನ್ನು ಆರಂಭಿಸುವ ಕುರಿತು ಮಾಹಿತಿ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಹುಬ್ಬಳ್ಳಿಗೆ ಹೊಸ ವಿಮಾನ ಸೇವೆ ಆರಂಭವಾಗಲಿದೆ.

ಎಕ್ಸ್‌ ಜಾಲತಾಣದ ಮಾಹಿತಿ ಪ್ರಕಾರ ಸ್ಟಾರ್ ಏರ್ ವಿಮಾನಯಾನ ಸಂಸ್ಥೆ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಅವರು ಕೇಳಿದ ವಿವರಣೆಗಳನ್ನು ವಿಮಾನ ನಿಲ್ದಾಣದ ಕಡೆಯಿಂದ ನೀಡಲಾಗಿದೆ. ಹುಬ್ಬಳ್ಳಿಯಿಂದ ಸ್ಟಾರ್ ಏರ್ ಸೇವೆಯನ್ನು ಪುನಃ ಆರಂಭಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಲಾಗಿದೆ.

ಫ್ಲೈ 91 ಎಂಬುದು ದೇಶಿಯ ವಿಮಾನ ಸೇವೆ ನೀಡುವ ವಿಮಾನಯಾನ ಸಂಸ್ಥೆಯಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಆಡಳಿತ ಮಂಡಳಿ ಫ್ಲೈ 91 ಜೊತೆ ಮಾತುಕತೆ ನಡೆಸುತ್ತಿದೆ. ಈಗಾಗಲೇ ಎರಡು ಬಾರಿ ಫ್ಲೈ 91 ತಜ್ಞರ ತಂಡ ವಿಮಾನ ನಿಲ್ದಾಣದಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದೆ. ಕೆಲವೇ ದಿನಗಳಲ್ಲಿ ವಿಮಾನ ಸೇವೆ ಆರಂಭಗೊಳ್ಳುವ ನಿರೀಕ್ಷೆ ಇದೆ.

ಕರ್ನಾಟಕದ ಹಳೆಯ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಖಾಸಗಿ ಕಂಪನಿಗೆ ನೀಡಲು ಈಗಾಗಲೇ ಕೇಂದ್ರ ಸರ್ಕಾರ ಮುಂದಾಗಿದೆ. ವಿಮಾನ ನಿಲ್ದಾಣದ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು 30 ವರ್ಷಗಳ ಅವಧಿಗೆ ಖಾಸಗಿ ಕಂಪನಿಗೆ ನೀಡಲಾಗುತ್ತದೆ. ಪ್ರಸ್ತುತ ರಾಜ್ಯದಲ್ಲಿ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯನ್ನು ಮಾತ್ರ ಖಾಸಗಿ ಕಂಪನಿಯ ನೋಡಿಕೊಳ್ಳುತ್ತಿದೆ.

ವಿಮಾನ ನಿಲ್ದಾಣದ ನಿರ್ವಹಣೆ ಖಾಸಗಿಗೆ ನೀಡಿದರೆ ವಾರ್ಷಿಕ ಆದಾಯದಲ್ಲಿ ಅರ್ಧದಷ್ಟು ಭಾರತೀಯ ವಿಮಾನ ನಿಲ್ದಾಣದ ಪ್ರಾಧಿಕಾರ (ಎಎಐ)ಗೆ ಹೋಗುತ್ತದೆ. ಆದರೆ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ವಹಣೆಯ ಒಪ್ಪಂದ ಯಾವ ಮಾದರಿಯಲ್ಲಿ ಇರುತ್ತದೆ? ಎಂಬುದು ಇನ್ನೂ ಸಹ ಅಂತಿಮಗೊಂಡಿಲ್ಲ.

ಹುಬ್ಬಳ್ಳಿಯ ಮೂಲಕ ವಾರಕ್ಕೆ ಸುಮಾರು 75 ವಿಮಾನಗಳು ಹಾರಾಟವನ್ನು ನಡೆಸುತ್ತವೆ. ನಿಲ್ದಾಣದಲ್ಲಿ ಸದ್ಯ ಒಂದು ಕೆಫೆ, ವಿಐಪಿ ಲಾಂಜ್ ಹೊರತಾಗಿ ಹೆಚ್ಚಿನ ಸೌಲಭ್ಯಗಳಿಲ್ಲ. ನಿಲ್ದಾಣದ ನಿರ್ವಹಣೆ ಖಾಸಗಿಗೆ ಹೋದರೆ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ಇದಕ್ಕೂ ಮೊದಲು ವಿಮಾಣ ನಿಲ್ದಾಣದಿಂದ ವಿಮಾನಗಳ ಹಾರಾಟ ಸಂಖ್ಯೆ ಹೆಚ್ಚಾಗಬೇಕಿದೆ.

ಸುಮಾರು 320 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ನಿರ್ಮಾಣ ಕಾರ್ಯ ನಡೆಯುತ್ತಿದೆ. 2026ರ ಮಾರ್ಚ್‌ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಖಾಸಗಿ ಕಂಪನಿ ನಿಲ್ದಾಣದ ನಿರ್ವಹಣೆ, ಅಭಿವೃದ್ಧಿ ಮಾತ್ರ ನೋಡಿಕೊಳ್ಳಲಿದೆ. ಆದರೆ ಎಟಿಸಿ, ಸಂವಹನ, ಸಿಎಸ್‌ಎಸ್‌ ಸೇರಿದಂತೆ ಇತರ ವ್ಯವಸ್ಥೆಗಳನ್ನು ಎಎಐ ನಿರ್ವಹಣೆ ಮಾಡಲಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ 2021-22ರಲ್ಲಿ 1,88,272, 2022-23ರಲ್ಲಿ 3,18,130 ಮತ್ತು 2023-24ರಲ್ಲಿ 3,58,754 ಪ್ರಯಾಣಿಕರು ಸಂಚಾರವನ್ನು ನಡೆಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆ ಅದಾನಿ ಗ್ರೂಪ್ ಒಡೆತನದಲ್ಲಿದೆ. ಹುಬ್ಬಳ್ಳಿ ನಿಲ್ದಾಣದ ನಿರ್ವಹಣೆ ಯಾರ ಪಾಲಾಗಲಿದೆ? ಎಂದು ಕಾದು ನೋಡಬೇಕಿದೆ.