ಗದಗ(ಮುಳಗುಂದ): ಪಟ್ಟಣದ ಹಿರಿಯ ವೈದ್ಯ ಡಾ.ಎಸ್.ಸಿ. ಚವಡಿ ಅವರಿಗೆ ಅನಾಮಧೇಯ ವಂಚಕರ ತಂಡವೊಂದು ವಿಡಿಯೋ ಕರೆ ಮಾಡಿ ನಿರಂತರ ೨೨ ಗಂಟೆಗಳ ಕಾಲ ವಿಚಾರಣೆ ನೆಪದಲ್ಲಿ ಹಣ ಪೀಕಲು ಪ್ರಯತ್ನಿಸಿ ವಿಫಲವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗದಗ ಗ್ರಾಮಾಂತರ ಪ್ರದೇಶದಲ್ಲಿ ಬಡವರ ಬಂಧುವೆಂದೇ ಖ್ಯಾತವಾಗಿರುವ ಡಾ.ಎಸ್.ಸಿ.ಚವಡಿ ಕಳೆದ ನಾಲ್ಕು ದಶಕಗಳಿಗೆ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲವೂ ಗ್ರಾಮಾಂತರ ಪ್ರದೇಶದ ಜನರಿಗೆ ಸೇವೆ ನೀಡುವ ಮೂಲಕ ಅತ್ಯಂತ ಜನಾನುರಾಗಿಯಾಗಿದ್ದಾರೆ.
ದಿ. ೧೧ರಂದು ನ್ಯಾಶನಲ್ ಇನವೆಸ್ಟಿಗೇಶನ್ ಆಥಾರಿಟಿ ಆಫ್ ಇಂಡಿಯಾ ಹೆಸರಲ್ಲಿ ಡಾ. ಚವಡಿ ಅವರಿಗೆ ದೂರವಾಣಿ ಕರೆ ಮಾಡಿದ ವ್ಯಕ್ತಿಯೋರ್ವ ನೀವು ಬೇನಾಮಿ ಕೋಟ್ಯಾಂತರ ರೂಪಾಯಿಗಳ ವ್ಯವಹಾರ ನಡೆಸಿದ್ದೀರಿ. ನಿಮ್ಮ ವಿರುದ್ಧ ಮುಂಬೈನ ಕೋಲಾಬಾ ಪೊಲೀಸ್ ಠಾಣೆಯಲ್ಲಿ ಮನಿ ಲ್ಯಾಂಡರಿಂಗ್ ಪ್ರಕರಣ ದಾಖಲಾಗಿದೆ. ನಿಮ್ಮ ಮೇಲೆ ಅರೆಸ್ಟ್ ವಾರಂಟ್ ಹೊರಡಿಸಲಾಗಿದೆ. ಈ ಪ್ರಕರಣದಲ್ಲಿ ವಿಡಿಯೋ ಕರೆಯಲ್ಲಿ ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾನೆ.
ನಿಮ್ಮಲ್ಲಿರುವ ಹಣದ ದಾಖಲೆ, ಆಸ್ತಿ ದಾಖಲೆಗಳನ್ನು ತೆಗೆದಿಟ್ಟುಕೊಳ್ಳುವಂತೆ ಸೂಚಿಸಿ ಇನ್ಸ್ಪೆಕ್ಟರ್ ಹೆಸರಿನಲ್ಲಿ ವಿಜಯಕುಮಾರ ಎಂಬ ವ್ಯಕ್ತಿ ನಿಮ್ಮನ್ನು ಇಲ್ಲಿಯೇ ಬಂಧಿಸಿ ತಂದು ವಿಚಾರಣೆ ನಡೆಸಬೇಕು. ನಿಮಗೆ ವಯಸ್ಸಾದ ಹಿನ್ನೆಲೆಯಲ್ಲಿ ವಿಡಿಯೋ ಕಾಲ್ ಮೂಲಕ ವಿಚಾರಣೆ ಮಾಡುತ್ತಿದ್ದೇವೆ. ಕೊಲಾಬಾದ ಡಿಸಿಪಿ ವಿಚಾರಣೆ ನಡೆಸಲಿದ್ದಾರೆಂದು ಹೇಳಿದ್ದಾನೆ. ನಿಮ್ಮನ್ನು ನರೇಶ ಗೋಯಲ್ ಮತ್ತು ತಂಡ ಹಿಂಬಾಲಿಸುತ್ತಿದೆ. ಈ ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ನಿಮ್ಮ ಮನೆಯವರಿಂದಲೂ ವಿಷಯ ಗೌಪ್ಯವಾಗಿರಲಿಯೆಂದು ಹೇಳಿದ್ದಾನೆ. ಅಷ್ಟರಲ್ಲಿ ಡಾ.ಎಸ್.ಸಿ.ಚವಡಿ ಬೆವತು ನೀರಾಗಿ ಆಸ್ತಿ ದಾಖಲೆಗಳನ್ನು ತಮ್ಮೊಂದಿಗಿಟ್ಟುಕೊಂಡು ಕೊಠಡಿಯ ಬಾಗಿಲು ಹಾಕಿಕೊಂಡಿದ್ದಾರೆ.
ಮರುದಿನ ಮಧ್ಯಾಹ್ನ ೧೨ ಗಂಟೆಗೆ ಡಿಸಿಪಿ ದಯಾನಾಯಕ ಹೆಸರಿನ ವ್ಯಕ್ತಿ ಮಾತನಾಡಿ, ನಾವು ವಿಚಾರಣೆ ಮಾತ್ರ ಮಾಡಿ ಸುಪ್ರೀಂಕೋರ್ಟಿಗೆ ಚಾರ್ಜಶೀಟ್ ಸಲ್ಲಿಸುತ್ತೇವೆ. ಸುಪ್ರೀಂಕೋರ್ಟ್ನಲ್ಲಿ ನೀವು ವಕೀಲರನ್ನು ನೇಮಕ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾನೆ.
ವೈದ್ಯ ಚವಡಿ ಯಾರದೇ ದೂರವಾಣಿ ಸ್ವೀಕರಿಸದಿದ್ದಾಗ ಸಾರ್ವಜನಿಕರು ಅವರ ಮನೆಗೆ ಧಾವಿಸಿದ್ದಾರೆ. ಮನೆಯ ಬಾಗಿಲು ಹಾಕಿರುವದನ್ನು ನೋಡಿ ಸಾರ್ವಜನಿಕರೇ ಮನೆಯ ಬಾಗಿಲು ಮುರಿಯಲು ಪ್ರಯತ್ನಿಸಿದ್ದಾರೆ. ಕೆಲವರು ಸಿಪಿಐ ಸಂಗಮೇಶ ಶಿವಯೋಗಿ ಅವರೊಂದಿಗೆ ವೈದ್ಯರ ಮನೆಗೆ ಬಂದಿದ್ದಾರೆ. ಮನೆಯ ಬಾಗಿಲು ಮುರಿಯುವ ಸದ್ದು ಕೇಳಿದ ವೈದ್ಯರು ಬಾಗಿಲು ತೆಗೆದಿದ್ದಾರೆ. ಸಿಪಿಆಯ್ ಸಂಗಮೇಶ ಶಿವಯೋಗಿ ವಿಡಿಯೋ ಕಾಲ್‌ನಲ್ಲಿ ಮಾತನಾಡಲು ಪ್ರಾರಂಬಿಸುತ್ತಲೇ ವಂಚಕರು ವಿಡಿಯೋ ಕಾಲ್ ಕತ್ತರಿಸಿದ್ದಾರೆ. ಈ ಕುರಿತು ಗದಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.