ಕರಿಭೀಮವ್ವ ಹೆದರಿ ಕೊಂಡು ಬೇಸಿಗೆಯಲ್ಲೂ ಚಳಿಜ್ವರ ಹಚ್ಚಿಕೊಂಡಿದ್ದಾಳೆ ಎಂಬ ಸುದ್ದಿ ಹರದಾರಿ ಗುಂಟ ಹಬ್ಬಿತು. ಕರಿಲಕ್ಷಂಪತಿ ಹತ್ತಿರ ಕಣಿ ಕೇಳಿ ಕುಂಟ್ತಿರುಪ್ತಿ ಹತ್ತಿರ ತಾಯತ ಕಟ್ಟಿಸಿದರು. ಡಾ. ತಿರ್ಮೂಲಿ ಮನೆಗೇ ಬಂದು ಟ್ರೀಟ್‌ಮೆಂಟ್ ಮಾಡಿದರೂ ಕರಿಭೀಮವ್ವಳ ಆರೋಗ್ಯ ಸುಧಾರಿಸಲಿಲ್ಲ. ಎಲ್ಲರೂ ತಲಿಗೊಂದು ಮಾತನಾಡತೊಡಗಿದರು. ಆಕೆಯ ತಂದೆ ತಾಯಿಗಳು ಭಯಂಕರ ಮನಸ್ಸಿಗೆ ಹಚ್ಚಿಕೊಂಡಿದ್ದರು. ಏನು ಮಾಡಿದರೂ ಆಕೆಗೆ ಗುಣವಾಗಲಿಲ್ಲ. ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾಗಿದ್ದರೂ ರೂಢಿಮೇಲೆ ಸೈಕಾಲಜಿಯಲ್ಲಿ ತನ್ನದೇ ಆದ ಹೆಸರು ಮಾಡಿದ್ದ. ತಿಗಡೇಸಿಯೇ ಇದಕ್ಕೆ ಪರಿಹಾರ ಎಂದು ಆತನ ಕಡೆ ಹೋದರು. ತಿಗಡೇಸಿ ಎಲ್ಲವನ್ನೂ ಕಿವಿಗೊಟ್ಟು ಕೇಳಿಸಿಕೊಂಡು ನಾಳೆ ಬೆಳಗಾ ಮುಂಜಾನೆ ಬಂದುಬಿಡಿ ಎಂದು ಹೇಳಿದ. ತಿಗಡೇಸಿ ಹೇಳಿದ ಸಮಯಕ್ಕೆ ಆಕೆಯನ್ನು ಕರೆದುಕೊಂಡು ಹೋದರು. ನೀವೆಲ್ಲ ಮಾತನಾಡಬೇಡಿ ಎಂದು ಕರಿಭೀಮವ್ವಳನ್ನು ಪೊಲೀಸರಂತೆ ವಿಚಾರಣೆ ಆರಂಭಿಸಿದರು. ಹೀಗೆ ಆಗಿ ಎಷ್ಟು ದಿನವಾಯಿತು? ಅಂದಾಗ ಆಕೆ ಎಂಟು ಅಂದಳು. ನೀವು ಅದರ ಹಿಂದಿನ ದಿನ ಎಲ್ಲಿ ಹೋಗಿದ್ದೀರಿ ಎಂದು ಕೇಳಿದಾಗ ನಾವು ಕಂಟಿದುರ್ಗಮ್ಮನ ಗುಡಿಗೆ ಹೋಗಿದ್ದೆವು ಅಂದಳು. ಗೂಡ್ ಅಂದ ತಿಗಡೇಸಿ ಅದು ಇದು ಕೇಳುತ್ತ ಹೋಗಲಿಬಿಡಿ ಅದಾದ ನಂತರ ಎಲ್ಲಿಗೆ ಹೋಗಿದ್ದಿರಿ ಎಂದು ಕೇಳಿದಾಗ… ಅದ್ಯಾರೋ ಕೆಂಪನೆಯ ಹುಡುಗನ ಭಾಷಣಕ್ಕೆ ಹೋಗಿದ್ದೆ ಅಂದಳು. ಅಲ್ಲೇನಾಯಿತು ಎಂದಾಗ… ರೊಂಯ್ಯೋ ಎಂದು ಅಳುತ್ತ… ಅವತ್ತು ನಾನು ನನ್ನ ನಾಲ್ಕೂ ಎಮ್ಮೆಯ ಹಾಲು ಹಿಂಡಿಕೊಂಡು ಹಿಂಡಾಲಿಯಂ ಕ್ಯಾನಿನಲ್ಲಿ ಹಾಕಿಕೊಂಡು ಮನೆ ಮನೆಗೆ ಕೊಡಲು ಹೊರಟಿದ್ದೆ. ದಾರಿಯಲ್ಲಿ ಕೆಂಪು ಹುಡುಗನ ಭಾಷಣಕ್ಕೆಂದು ನಿಂತೆ… ಆತ ಏನೋ ಒದರಿದ ಕೂಡಲೇ ಹಾಲು ಡಬಕ್ ಎಂದು ಡಬ್ಬಾಕಿಕೊಂಡು ಅರ್ಧ ಚೆಲ್ಲಿಹೋದವು. ಮನೆಯಲ್ಲಿ ಬಯ್ಯುತ್ತಾರೆ ಅಂತ…… ಅನ್ನುತ್ತಿದ್ದಂತೆ ಅರ್ಥವಾಯಿತು ಎಂದು ಕೈ ಎತ್ತಿ ಆಕೆಯ ತಂದೆ ತಾಯಿಗಳ ಕಡೆಗೆ ತಿರುಗಿ… ಇದು ನಿಮ್ಮ ಮಗಳಿಗೆ ಇರುವ ಕಾಯಿಲೆ.. ನೀವು ಸಿಬಿಐ ತನಿಖೆಗೆ ಒತ್ತಾಯಿಸಿ ಸತ್ಯಾಗ್ರಹ ಮಾಡಿರಿ ಎಂದು ಹೇಳಿ ಕಳುಹಿಸಿದ.