ಹೊಸನಗರ: ವಿಕೃತ ಮನಸ್ಥಿತಿಯ ಪಾಪಿಗಳು ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ತೋಟದಕೊಪ್ಪ ಗ್ರಾಮದ ವಿಜಾಪುರದಲ್ಲಿ ನಡೆದಿದೆ.
ಹಸುವಿನ ಮಾಲಿಕ ನವೀನ್ ಎಂಬುವರು ಹೊಸನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಎಂದಿನಂತೆ ನಮ್ಮ ದನಗಳನ್ನು ಮೇಯಲು ಬಿಟ್ಟಿದ್ದು ಶನಿವಾರ ಸಂಜೆ ೪:೩೦ರ ಸುಮಾರಿಗೆ ದನದ ಕೆಚ್ಚಲಿನಲ್ಲಿ ರಕ್ತ ಸೋರುತ್ತಿರುವುದಾಗಿ ಊರಿನವರು ತಿಳಿಸಿದರು. ತಕ್ಷಣ ಸ್ಥಳಕ್ಕೆ ಧಾವಿಸಿ ನೋಡಿದಾಗ 9 ವರ್ಷ ಪ್ರಾಯದ ಕರು ಹಾಕಿದ ಮಲೆನಾಡು ಗಿಡ್ಡ ತಳಿಯ ಹಸುವಿನ ಕೆಚ್ಚಲು ಕೊಯ್ದಿದ್ದು ಗಮನಕ್ಕೆ ಬಂತು. ನಂತರ ಗ್ರಾಮಸ್ಥರ ಸಹಾಯದಿಂದ ಹಾಗೂ ಹೊಸನಗರದ ಪೊಲೀಸ್ ಸಬ್ಇನ್ಸ್ಪೆಕ್ಟರ್ ಶಂಕರಗೌಡ ಪಾಟೀಲ್, ಪೊಲೀಸ್ ಸಿಬ್ಬಂದಿ ಗೋಪಾಲಕೃಷ್ಣ, ಸುನೀಲ್ ಭೇಟಿ ನೀಡಿ ಪರಿಶೀಲಿಸಿದರು. ದನವನ್ನು ಮನೆಗೆ ಕರೆ ತಂದು ಪಶು ವೈದ್ಯ ಸಂತೋಷ್ರವರ ಮೂಲಕ ಹೊಲಿಗೆ ಹಾಕಿಸಿ ಚಿಕಿತ್ಸೆ ಕೊಡಿಸಲಾಗಿದೆ.
ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಸುವಿನ ಮಾಲಿಕ ನವೀನ್ ದೂರಿನಲ್ಲಿ ತಿಳಿಸಿದ್ದು, ಹೊಸನಗರ ಪೊಲೀಸ್ರು ತಪ್ಪಿತಸ್ಥರಿಗಾಗಿ ಬಲೆ ಬೀಸಿದ್ದಾರೆ.