ರಾಮನಗರ : ಮೈಸೂರು- ಉದಯಪುರ ನಡುವೆ ಸಂಚರಿಸುವ ಪ್ಯಾಲೇಸ್ ಕ್ವೀನ್ ಹಮ್ ಸಫರ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 19668) ರೈಲಿನ ಎಂಜಿನ್‌ನಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆ ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ಬಳಿ ನಡೆದಿದೆ.
ಮೈಸೂರಿನಿಂದ ಹೊರಟಿದ್ದ ರೈಲು ಬೆಳಿಗ್ಗೆ 11.45ರ ಸುಮಾರಿಗೆ ಚನ್ನಪಟ್ಟಣ ನಿಲ್ದಾಣ ಕಳೆದು ವಂದಾರಗುಪ್ಪೆ ಬಳಿ ಸಾಗುವಾಗ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಈ ವೇಳೆ ತಕ್ಷಣ ಎಚ್ಚತ್ತ ಲೋಕೊಪೈಲಟ್, ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿ ರೈಲು ನಿಲ್ಲಿಸಿದರು. ಬಳಿಕ ಸ್ಥಳಕ್ಕೆ ಬಂದ ಚನ್ನಪಟ್ಟಣದ ಅಗ್ನಿಶಾಮಕ ದಳ, ರೈಲ್ವೆ ಸಿಬ್ಬಂದಿಗಳ ನೆರವಿನಿಂದ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ, ಇನ್ನು ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಿಂದಾಗಿ ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ ಎಂದು ತಿಳಿದು ಬಂದಿದೆ.