ಸ್ವಯಂ‌ ನಿವೃತ್ತಿ ಘೋಷಣೆ ದುರಂತದ ವಿಷಯ

ಬೆಂಗಳೂರು: ನಾರಾಯಣ ಭರಮನಿ‌ ಅವರು ಸ್ವಯಂ‌ ನಿವೃತ್ತಿ ಘೋಷಿಸಿರುವುದು ನಿಜಕ್ಕೂ ದುರಂತದ ವಿಷಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದುರಾಹಂಕಾರ, ದುರಾಡಳಿತಕ್ಕೆ ರಾಜ್ಯವೇ ಬೇಸತ್ತು ಹೋಗಿದೆ. ಇವರ ಸರ್ಕಾರದಲ್ಲಿ ಗೌರವಸ್ಥ ಅಧಿಕಾರಿಗಳ ಅಪಮಾನ ಸತತವಾಗಿ ನಡೆಯುತ್ತಿದೆ.
ಅಧಿಕಾರಿಗಳ ಮೇಲೆ ದಬ್ಬಾಳಿಕೆ, ಕಪಾಳ ಮೋಕ್ಷ, ಬಹಿರಂಗವಾಗಿ ಅಧಿಕಾರಿಗಳನ್ನು ಏಕವಚನದಲ್ಲಿ ನಿಂದಿಸುವ ಮಟ್ಟಿಗೆ ಇವರ ದುರಹಂಕಾರ ಏರಿದೆ.
ಇತ್ತೀಚಿಗೆ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಎ. ಎಸ್. ಪಿ ನಾರಾಯಣ ಭರಮನಿ‌ ಅವರಿಗೆ ಮುಖ್ಯಮಂತ್ರಿಗಳು ಸಾರ್ವಜನಿಕವಾಗಿ ಅವಮಾನಿಸಿದ ಹಿನ್ನಲೆಯಲ್ಲಿ ಈಗ ಅವರು ಸ್ವಯಂ‌ ನಿವೃತ್ತಿ ಘೋಷಿಸಿರುವುದು ನಿಜಕ್ಕೂ ದುರಂತದ ವಿಷಯ.
ಈ ಹಿಂದಿನ ಅಧಿಕಾರಾವಧಿಯಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಪ್ರಾಣಕಳೆದುಕೊಂಡ ಘಟನೆಗಳು ನಡೆದಿತ್ತು. ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರಾಜ್ಯದ ಅಧಿಕಾರಿಗಳು ಬೇಸತ್ತಿರುವುದಕ್ಕೆ ಇದು ಮತ್ತೊಂದು ಉದಾಹರಣೆ.
ದಕ್ಷ ಅಧಿಕಾರಿಗಳಿಗೆ ನೈತಿಕ ಬಲ ತುಂಬುವ ಬದಲು ಈ ರೀತಿ ಅವಮಾನಿಸಿರುವುದು ಖಂಡನೀಯ. ದಕ್ಷ ಅಧಿಕಾರಿಗಳು ಧೃತಿಗೆಡದೆ ಕಾರ್ಯನಿರ್ವಹಿಸಬೇಕು. ಅವರೊಂದಿಗೆ ನಾವು ಇದ್ದೇವಿ, ರಾಜ್ಯದ ಜನರಿದ್ದಾರೆ, ಮಾಧ್ಯಮದವರಿದ್ದಾರೆ. ಸರ್ಕಾರದ ಕೆಟ್ಟ ವ್ಯವಸ್ಥೆಯ ವಿರುದ್ಧ ಎಲ್ಲರೂ ಸೇರಿ ಇಂದು ಹೋರಾಡಬೇಕಾಗಿದೆ ಎಂದಿದ್ದಾರೆ.