ಸೈನಿಕನ ಕುಟುಂಬಕ್ಕೆ ಸಿಗದ ಪರಿಹಾರದ ಭೂಮಿ: ಪತ್ನಿಯ ನಾಲ್ಕು ದಶಕದ ಹೋರಾಟಕ್ಕೆ ‘ಸಾವು’

ಬಿ.ವಿ.ಗೋಪಿನಾಥ್

ಸಂ.ಕ ಸಮಾಚಾರ,ಕೋಲಾರ: ಕಳೆದ ೪೦ ವರ್ಷಗಳಿಂದ ತನ್ನ ಪತಿ ಮಾಜಿ ಯೋಧರಿಗೆ ಮಂಜೂರಾದ ಸರ್ಕಾರದ ಜಮೀನನ್ನು ಪಡೆಯಲು ಹೋರಾಡಿ ಕೊನೆಗೂ ಸಾಧ್ಯವಾಗದೆ ಮಹಿಳೆ ಸಾವನ್ನಪ್ಪಿದ ಪ್ರಕರಣ ನಡೆದಿದೆ.
ದೇಶ ಕಾಯುವ ಯೋಧರ ಕುಟುಂಬವನ್ನು ಸರ್ಕಾರದ ಆಡಳಿತ ವ್ಯವಸ್ಥೆ ಎಷ್ಟರಮಟ್ಟಿಗೆ ನಿಕೃಷ್ಟವಾಗಿ ನೋಡುತ್ತದೆ ಎಂಬುದಕ್ಕೆ ಈ ಘಟನೆ ನಿದರ್ಶನವಾಗಿದೆ. 1972ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಗಂಭೀರವಾಗಿ ಗಾಯಗೊಂಡು ನಂತರ ಸಾವನ್ನಪ್ಪಿದ್ದ ಕೆಜಿಎಫ್ ನ ಯೋಧನ ಕುಟುಂಬದ ವ್ಯಥೆಯ ಕಥೆ ಇದು. ತನ್ನ ಪತಿಯ ಸೇವೆಗೆ ಸರ್ಕಾರ ಮಂಜೂರು ಮಾಡಿದ್ದ 8 ಎಕರೆ ಜಮೀನು ಪಡೆಯಲು ನಾಲ್ಕು ದಶಕಗಳಿಂದ ಕಂದಾಯ ಇಲಾಖೆಯ ಕಚೇರಿಯಿಂದ ಕಚೇರಿಗೆ ಅಲೆದಾಡಿ ಕೊನೆಗೂ ಸಾಧ್ಯವಾಗದೆ ಕೊನೆಯುಸಿರೆಳೆದ ಯೋಧನ ಪತ್ನಿ ಶನಿವಾರ ಸಾವನ್ನಪ್ಪುವ ಜೊತೆಗೆ ಆಕೆಯ ಹೋರಾಟವು ಸತ್ತು ಹೋಗಿದೆ.

ಮೃತ ಯೋಧನ ಪತ್ನಿಯ ನಾಲ್ಕು ದಶಕಗಳ ಹೋರಾಟಕ್ಕೂ ಕಿಂಚಿತ್ತು ಬೆಲೆ ಕೊಡದ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶಗೊಂಡ ಆಕೆಯ ಸಂಬಂಧಿಕರು ಶವವನ್ನು ಜಿಲ್ಲಾಧಿಕಾರಿ ಕಚೇರಿ ಮುಂದೆ ಇಟ್ಟು ಪ್ರತಿಭಟನೆ ನಡೆಸುವ ಮೂಲಕ ಗಡಿ ಕಾಯುವ ಸೈನಿಕರ ಸ್ಥಿತಿಗತಿಗಳನ್ನು ತೆರೆದಿಟ್ಟರು.

ಕೋಲಾರ ಜಿಲ್ಲಾ ನಿವೃತ್ತ ಯೋಧರ ಸಂಘದ ಅಧ್ಯಕ್ಷ ಜಗನ್ನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಮುಂದಾದ ವೇಳೆ ಪೊಲೀಸರು ಮಧ್ಯಪ್ರವೇಶ ಮಾಡಿ ಅಧಿಕಾರಿಗಳಿಂದ ಯಥಾಪ್ರಕಾರ ನ್ಯಾಯ ಕೊಡಿಸುವ ಭರವಸೆಯ ಶಾಸ್ತ್ರ ಮಾಡಿದರು.
ಮೃತ ಮಹಿಳೆಯ ಮಕ್ಕಳು ಹಾಗೂ ಕುಟುಂಬದವರ ಜೊತೆ ಮಾತನಾಡಿದ ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳ ಸೋಮವಾರ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡುವ ಭರವಸೆ ಕೊಟ್ಟರು.

ದಂಪತಿಯ ಕನಸುಗಳು ಸಾವು : ಕೆಜಿಎಫ್ ತಾಲೂಕಿನ ಪಾರಂಡಹಳ್ಳಿಯ ಮಾಜಿ ಯೋಧ ಕೆಂಚಪ್ಪ ಸೋಮಣ್ಣ 1972ರ ಭಾರತ ಪಾಕಿಸ್ತಾನ ಯುದ್ದದಲ್ಲಿ ಪಾಲ್ಗೊಂಡಿದ್ದ ವೇಳೆ ಗಂಭೀರವಾಗಿ ಗಾಯಗೊಂಡಿದ್ದರು. ಅವರಿಂದ ಸೈನ್ಯದಲ್ಲಿ ಸೇವೆ ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಅವರನ್ನು ನಿವೃತ್ತಿಗೊಳಿಸಿ ಕಾನೂನಿನ ಪ್ರಕಾರ ಎಂಟು ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಭಾರತೀಯ ಸೇನೆಯು ಪ್ರಸ್ತಾವನೆ ಸಲ್ಲಿಸಿತ್ತು. ಸುಮಾರು ಏಳೆಂಟು ವರ್ಷಗಳ ಕಾಲ ಕಚೇರಿಯಿಂದ ಕಚೇರಿಗೆ ಅಲೆದಾಡಿದ ಸೋಮಣ್ಣ ತಮ್ಮ ಸೇವೆಗೆ ಪರಿಹಾರವಾಗಿ ಕೊಡಬೇಕಾದ ಭೂಮಿ ಮತ್ತು ದಾಖಲೆಗಳನ್ನು ಪಡೆಯಲು ವಿಫಲರಾಗಿ ಅದೇ ಕೊರಗಿನಲ್ಲಿ ಸಾವನ್ನಪ್ಪಿದ್ದರು. ಗಂಡನ ಸಾವಿನ ನಂತರ ಪತ್ನಿ ಶಾಂತಮ್ಮ ನಾಲ್ಕು ದಶಕಗಳಿಂದ ಸರ್ಕಾರಿ ಕಚೇರಿಗಳ ಬಾಗಿಲು ಕಾಯುವ ಕಾಯಕ ಮುಂದುವರೆಸಿದ್ದರು.
ಶಾಂತಮ್ಮನ ಸೌಮ್ಯ ಹೋರಾಟದ ಕುರಿತು ಕನಿಕರವಿಲ್ಲದ ಅಧಿಕಾರಿಗಳು ಇದುವರೆಗೂ ಪರಿಹಾರದ ಭೂಮಿಯ ದಾಖಲೆ ನೀಡಿರಲಿಲ್ಲ. ತನ್ನ ಗಂಡನ ತ್ಯಾಗಕ್ಕೆ ಪರಿಹಾರವಾಗಿ ಸರ್ಕಾರ ಮಂಜೂರು ಮಾಡಿದ್ದ ಭೂಮಿಯ ಸರ್ವೆ ಮಾಡಿಸಿ ದಾಖಲೆಗಳನ್ನು ನೀಡುವಂತೆ ೪೦ ವರ್ಷಗಳಿಂದ ಕಛೇರಿಗಳಿಗೆ ಸುತ್ತಾಡಿ ಸುಸ್ತಾಗಿದ್ದ ಶಾಂತಮ್ಮ ತನ್ನ ಪತಿಯ ಹಾದಿಯಲ್ಲಿ ಪರಿಹಾರ ಸಿಗದ ಕೊರಗಿನಲ್ಲಿ ಶನಿವಾರ ಬೆಳಗ್ಗೆ ಜಾಲಪ್ಪ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.

ಕೊನೆಗೂ ಶಾಂತಮ್ಮನಿಗೆ ಬದುಕಿರುವಾಗಲೇ ಪರಿಹಾರ ಕೊಡದ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ಆಕೆಯ ಸಂಬಂಧಿಕರು ಶವವನ್ನು ತಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಇರಿಸಿ ಆಡಳಿತಶಾಹಿ ವ್ಯವಸ್ಥೆಗೆ ಧಿಕ್ಕಾರ ಕೂಗಲು ಮುಂದಾಗಿದ್ದರು.
ಜಿಲ್ಲಾಡಳಿತ ಕೇಂದ್ರದ ಮುಂದೆ ಶವ ಇಟ್ಟರೆ ಸರ್ಕಾರಕ್ಕೆ ಮತ್ತು ಅದರ ಆಡಳಿತಕ್ಕೆ ಮರ್ಯಾದೆ ಹೋಗುತ್ತದೆ ಎಂಬ ಕಾರಣಕ್ಕೆ ಮಧ್ಯಪ್ರವೇಶ ಮಾಡಿದ ಪೊಲೀಸರು ಅಪರ ಜಿಲ್ಲಾಧಿಕಾರಿ ಮೂಲಕ ಭರವಸೆ ಕೊಡಿಸಿ ಆಕ್ರೋಶಗೊಂಡಿದ್ದ ಶಾಂತಮ್ಮನವರ ಸಂಬಂಧಿಕರನ್ನು ಸಮಾಧಾನಪಡಿಸಿ ಸಂಜೆ ಅಂತ್ಯಕ್ರಿಯೆ ನಡೆಸುವಂತೆ ಮನವೊಲಿಸಿದರು.

ಇದೊಂದೇ ಅಲ್ಲ…ಹತ್ತಾರು ವ್ಯಥೆ : ದೇಶದ ಗಡಿಯನ್ನು ಕಾಯುವ ಯೋಧರನ್ನು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಳ್ಳುವ ಸರ್ಕಾರಿ ವ್ಯವಸ್ಥೆಗೆ ಶಾಂತಮ್ಮ ಪ್ರಕರಣ ಒಂದೇ ಅಲ್ಲ ಸಾಕಷ್ಟು ನಿದರ್ಶನಗಳಿವೆ ಎಂದು ನಿವೃತ್ತ ಯೋಧರು ಮಮ್ಮಲ ಮರುಗುತ್ತಾರೆ.
ಕೋಲಾರ ಜಿಲ್ಲೆಯೊಂದರಲ್ಲಿ ಈ ರೀತಿಯ ಉದಾಸೀನದ ಪ್ರಕರಣಗಳು ನೂರಾರು ಇವೆ. ಕಾಲಕಾಲಕ್ಕೆ ನಿವೃತ್ತ ಯೋಧರ ಅಥವಾ ಅವರ ಕುಟುಂಬದವರ ಸಭೆ ನಡೆಸಿ ಅವರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ಕನಿಷ್ಠ ಕಾಳಜಿಯನ್ನು ಜಿಲ್ಲಾಡಳಿತ ತೋರಿಸುವುದಿಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನಿವೃತ್ತ ಸೈನಿಕರು ದೂರಿದರು. ನಮ್ಮ ಜೀವದ ಮೇಲಿನ ಹಂಗು ತೊರೆದು ದೇಶದ ಗಡಿಯನ್ನು ಕಾಯುವ ನಮ್ಮನ್ನು ಸರ್ಕಾರ ಮತ್ತು ಆಡಳಿತಶಾಹಿಯು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಳ್ಳುವ ಅಮಾನವೀಯತೆ ತೋರಿಸುತ್ತಿದೆ. ಶಾಂತಮ್ಮನವರ ರೀತಿಯಲ್ಲೇ ಎಷ್ಟೋ ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಅವರು ದೂರಿದರು.