ಪುಣೆ: ಕುಂದಮಲ ಪ್ರದೇಶದಲ್ಲಿ ಇಂದ್ರಯಾಣಿ ನದಿಗೆ ಪ್ರವಾಸಿಗರಿಗಾಗಿ ನಿರ್ಮಿಸಲಾದ ಪಾದಚಾರಿ ಸೇತುವೆ ಕುಸಿದು ಬಿದ್ದ ಪರಿಣಾಮ ಹಲವಾರು ಜನರು ನದಿಯ ಪ್ರವಾಹಕ್ಕೆ ಸಿಲುಕಿ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಪಿಂಪ್ರಿ-ಚಿಂಚ್‌ವಾಡ್ ಪೊಲೀಸರ ಆರಂಭಿಕ ವರದಿಗಳ ಪ್ರಕಾರ, ಈ ಘಟನೆ ಮಧ್ಯಾಹ್ನ 3:30ರ ಸುಮಾರಿಗೆ ಸಂಭವಿಸಿದ್ದು, 15ಕ್ಕೂ ಹೆಚ್ಚು ಜನರು ನದಿ ಪ್ರವಾಹದಲ್ಲಿ ಸಿಲುಕಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಸಂತ ತುಕಾರಾಮರಿಗೆ ಸಂಬಂಧಿಸಿದ ಪವಿತ್ರ ಯಾತ್ರಾ ಸ್ಥಳವಾದ ದೇಹುಗೆ, ವಿಶೇಷವಾಗಿ ವಾರಾಂತ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಸಂದರ್ಶಕರು ಬರುತ್ತಾರೆ. ಭಾನುವಾರವಾದ್ದರಿಂದ ಸೇತುವೆಯಲ್ಲಿ ಬಹಳಷ್ಟು ಜನರು ಸೇರಿದ್ದು, ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ.
ಸೇತುವೆಯ ಮೇಲಿದ್ದ ಹಲವಾರು ವ್ಯಕ್ತಿಗಳು ನೀರಿಗೆ ಬಿದ್ದು ನದಿಯ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪಿಂಪ್ರಿ-ಚಿಂಚ್‌ವಾಡ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ತಲೆಗಾಂವ್ ದಭಾಡೆ ಪೊಲೀಸರ ತುರ್ತು ಪ್ರತಿಕ್ರಿಯೆ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. “ಸುಮಾರು 15ಕ್ಕೂ ಹೆಚ್ಚು ಜನರು ನದಿಯಲ್ಲಿ ಸಿಲುಕಿರುವ ಶಂಕೆ ಇದೆ. ಇಲ್ಲಿಯವರೆಗೆ, 5 ರಿಂದ 6 ಜನರನ್ನು ರಕ್ಷಿಸಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ” ಎಂದು ಪಿಂಪ್ರಿ-ಚಿಂಚ್‌ವಾಡ್ ಪೊಲೀಸರು ತಿಳಿಸಿದ್ದಾರೆ.