ಕೆಲವು ವಾರಗಳ ಹಿಂದೆ, ನಾನು ಸಂಚಾಲಕನಾಗಿರುವ ಸಾಮಾಜಿಕ ಜವಾಬ್ದಾರಿ ತಂಡದ ವಿದ್ಯಾರ್ಥಿಗಳು ನನ್ನನ್ನು ಭೇಟಿ ಮಾಡಲು ಬಂದಿದ್ದರು. ಮಹಿಳೆಯರ ಸುರಕ್ಷತೆಗಾಗಿ ಸಮರ ಕಲೆ ತಜ್ಞರಿಂದ ಕಾಲೇಜಿನ ವಿದ್ಯಾರ್ಥಿನಿಯರಿಗೆ ಕೆಲವೊಂದು ಕಲೆಗಳ ಅಭ್ಯಾಸದ ಮೂಲಕ ಆಕ್ರಮಣಕಾರರನ್ನು ಹಿಮ್ಮೆಟ್ಟಿಸುವ ವಿಧಾನಗಳನ್ನು ಕಲಿಸುವುದಾಗಿತ್ತು. ಅವರ ಆಲೋಚನೆಯೇನೋ ಚೆನ್ನಾಗಿದ್ದರೂ, ೨೧ನೇ ಶತಮಾನದ ಭಾರತೀಯ ಮಹಿಳೆಯರಿಗೆ ಸಿನಿಮೀಯ ಶೈಲಿಯಲ್ಲಿ ನಡೆಯುವ ಆಕ್ರಮಣಗಳನ್ನು ಎದುರಿಸುವ ಸಂದರ್ಭವೊದಗಿ ಬರುವುದು ಬಹಳ ಅಪರೂಪ ಎನ್ನುವುದು ನನ್ನ ಅಂದಾಜು. ಹಾಗೊಮ್ಮೆ ಆಕ್ರಮಣಗಳು ನಡೆದರೂ ಅದರಿಂದ ಪಾರಾಗಲು ಈ ಸಮರ ಕಲೆಗಳು ಸಹಾಯ ಮಾಡುತ್ತವೆ ಎಂದು ನನಗೆ ನಂಬಿಕೆಯಿಲ್ಲ. ಇದು ಸಿನಿಕತನವಲ್ಲ, ಸಮಾಜ, ಸಮುದಾಯಗಳಲ್ಲಿ ನಡೆಯುವ ಮಹಿಳಾ ದೌರ್ಜನ್ಯಗಳ ಪರಿಯೇ ಬೇರೆಯ ರೀತಿಯಾದದ್ದು ಎನ್ನುವುದು ನನ್ನ ಗಮನಕ್ಕೆ, ಅನುಭವಕ್ಕೆ ಬಂದಿರುವುದಾಗಿದ್ದರಿಂದ ಹಾಗೆ ಹೇಳಬೇಕಾಯಿತು. ಆದರೆ ತಂಡದ ವಿದ್ಯಾರ್ಥಿಗಳು ಸಮರ ಕಲೆಗಳ ಕಾರ್ಯಕ್ರಮವನ್ನು ಆಯೋಜಿಸಲು ಉತ್ಸುಕರಾಗಿದ್ದರಿಂದ ಅವರ ಉತ್ಸಾಹಕ್ಕೆ ನನ್ನ ಸಮ್ಮತಿಯಿದೆ ಎನ್ನಬೇಕಾಯಿತು. ಆದರೆ ಅವರಿಗೆ ಮಹಿಳಾ ಸುರಕ್ಷತೆಯನ್ನು ಹೇಗೆ ನಮ್ಮ ಕೆಲವೊಂದು ಆಲೋಚನಾ ಕ್ರಮಗಳನ್ನು ಬದಲಿಸಿಕೊಳ್ಳುವ ಅಥವಾ ಆ ಸಮಯಕ್ಕೆ ತಕ್ಕುದಾದ ವಿಮರ್ಶಾತ್ಮಕ ಆಲೋಚನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಅಕ್ರಮಣಕಾರರಿಂದ ಪಾರಾಗಬಹುದು ಎನ್ನುವುದು ನನ್ನ ಗಟ್ಟಿಯಾದ ನಂಬಿಕೆ. ಅದನ್ನಿಲ್ಲಿ ಪ್ರಸ್ತುತಪಡಿಸಲು ಬಯಸುತ್ತೇನೆ.
ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ, ಬನ್ನೇರುಘಟ್ಟ ರಸ್ತೆಗೆ ಸಮೀಪವಿದ್ದ ಮಾನಸಿಕ ಪುನರ್ವಸತಿ ಕೇಂದ್ರವೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಅದು ಕ್ರಿಸ್ಮಸ್ ಈವ್‌ನ ಸಮಯವಾದದ್ದರಿಂದ ಕೆಲವು ರೋಗಿಗಳು ಮಧ್ಯ ರಾತ್ರಿಯ ಪ್ರಾರ್ಥನೆಗೆ ಹತ್ತಿರದ ಚರ್ಚ್ಗೆ ಹೋಗಲು ಅಣಿಯಾಗಿದ್ದರು. ಇವರ ಜೊತೆಗೆ ಕೆಲವು ಅಂತಾರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯದ ಮೂಲಕ ಬಂದ ಕೆಲವು ವಿದ್ಯಾರ್ಥಿಗಳೂ ರೋಗಿಗಳ ಜೊತೆಗೆ ಹೋಗಲು ಸಿದ್ಧವಾಗಿದ್ದರು. ಅವರೆಲ್ಲರಿಗೂ ಚಿಕ್ಕ ಬಸ್‌ನಲ್ಲಿ ಪ್ರಯಾಣದ ವ್ಯವಸ್ಥೆಯಾಗಿದ್ದರಿಂದ ಯಾವುದೇ ಅಸುರಕ್ಷತೆಯ, ಅಪಾಯದ ಭಯವಿರಲಿಲ್ಲ. ಹಾಗೆ ಪ್ರಾರ್ಥನೆಗೆ ಹೋದ ವಿದೇಶಿ ವಿದ್ಯಾರ್ಥಿಗಳಲ್ಲಿ ನಾರ್ವೆ ದೇಶದ ಹುಡುಗಿಯೊಬ್ಬಳು ಯಾಕೋ ಪ್ರಾರ್ಥನೆಯ ಮಧ್ಯೆಯೇ ಯಾರಿಗೂ ಹೇಳದೇ ಹಿಂದಿರುಗಿದ್ದಳು. ಆಗ ಬನ್ನೇರುಘಟ್ಟ ರಸ್ತೆ, ಮೀನಾಕ್ಷಿ ದೇವಸ್ಥಾನದ ಹತ್ತಿರವೆಲ್ಲ ಸಂಪೂರ್ಣವಾಗಿ ನಿರ್ಜನವಾದ ಪ್ರದೇಶವಾಗಿತ್ತು. ಮಧ್ಯ ರಾತ್ರಿ ಒಬ್ಬಳೇ ಚೂಡಿದಾರ್‌ನಲ್ಲಿ ನಡೆದು ಬರುತ್ತಿರುವ ಹುಡುಗಿಯನ್ನು ಯಾರೋ ಕಿಡಿಗೇಡಿಗಳು ಹಿಂಬಾಲಿಸಲು ಶುರು ಮಾಡಿದರು. ಏನೋ ಅಪಾಯದ ವಾಸನೆ ಹತ್ತಿದ ಆ ಹುಡುಗಿ ಜೋರಾಗಿ ಓಡಲು ತೊಡಗಿ, ಮಧ್ಯೆ ಎಲ್ಲೋ ಎಡವಿ ಬಿದ್ದು ಮನೆ ಸೇರಿದ್ದಳು. ತುಂಬಾ ಹೆದರಿದ್ದ ಆಕೆ ಮರುದಿನ ಘಟನೆಯನ್ನು ಹೇಳಿಕೊಳ್ಳುವಾಗ ತುಂಬಾ ಆಘಾತಕ್ಕೊಳಗಾಗಿದ್ದಳು. ಸ್ವಲ್ಪ ಸಮಾಧಾನವಾದ ಮೇಲೆ, ಅವಳ ಮೇಲಿನ ಕಾಳಜಿಯಿಂದ, “ನಿನ್ನ ತಲೆಯಲ್ಲಿ ಬುದ್ಧಿಯಿದ್ದಿದ್ದರೆ ಹೀಗೆ ಮಾಡುತ್ತಿರಲಿಲ್ಲ, ಯಾರಿಗೂ ಹೇಳದೇ, ಒಬ್ಬಳೇ ಆ ರಸ್ತೆಯಲ್ಲಿ ಬಂದಿರುವುದು ನಿನ್ನದೇ ತಪ್ಪು, ನೀನು ಯೋಚಿಸಿ, ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗಿತ್ತು” ಅಂತೆಲ್ಲ ಗದರಿದ್ದೆವು. ನಮ್ಮ ದೇಶದಲ್ಲಿ ನಾವು ಮಧ್ಯರಾತ್ರಿಯೂ ಒಬ್ಬರೇ ಓಡಾಡುತ್ತೇವೆ ಎನ್ನುವುದು ಅವಳ ವಾದ! ಅದಕ್ಕೆ ನಾನು, ಆ ರಸ್ತೆಯಲ್ಲಿ ಸಂಜೆ ಆರು ಘಂಟೆಗೆ ನನ್ನಂಥವರೇ ಓಡಾಡಲು ಹಿಂಜರಿಯುವಾಗ, ಮಧ್ಯರಾತ್ರಿ, ಅದೂ ಒಬ್ಬಳು ಹುಡುಗಿ, ಓಡಾಡುತ್ತಾಳೆ ಎನ್ನುವುದು ನಾವು ಊಹಿಸಿಕೊಳ್ಳಲೂ ಅಸಾಧ್ಯ ಎಂದಿದ್ದೆ.
ಆ ಸಮಯದಲ್ಲಿ ಅವಳು ಯೋಚಿಸಬೇಕಾಗಿದ್ದಿದು, ಅಗತ್ಯವಾದದ್ದು ವಿಮರ್ಶಾತ್ಮಕ ಆಲೋಚನೆಯ ಪ್ರಕ್ರಿಯೆಯಿಂದ. ಮನೋವಿಜ್ಞಾನದ ಪ್ರಕಾರ ನಮ್ಮ ಕ್ರಿಯೆಗಳ ಹಿಂದಿನ ಆಲೋಚನೆಯನ್ನು ತರ್ಕ ಬದ್ಧವಾಗಿ ವಿಶ್ಲೇಷಿಸಿ, ಆ ಪ್ರಸಂಗಕ್ಕೆ, ವಸ್ತು ಸ್ಥಿತಿಯ ಮಾಹಿತಿಗಳಿಗೆ ಅನುಗುಣವಾಗಿ ಯೋಚಿಸಿ ಮುನ್ನಡೆಯುವ ಒಂದು ಪ್ರಕ್ರಿಯೆ. ಇದನ್ನು ಬಿಟ್ಟು, ನಮ್ಮ ಭಾವನೆಗಳಿಗೆ, ನಮ್ಮ ವೈಯಕ್ತಿಕ ಇಷ್ಟ, ಕಷ್ಟಗಳಿಗೆ ಅವಕಾಶ ಕೊಟ್ಟರೆ, ಸಂತ್ರಸ್ತರಾಗುವುದು, ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಕೊಳ್ಳುವುದು ನಾವೇ ಹೊರತು ಇತರರಲ್ಲ. ಹಾಗೆಯೇ, ಮೇಲಿನ ಘಟನೆಯಲ್ಲಿ ಅಕಸ್ಮಾತ್, ಅವಳ ಮೇಲೆ ಒಬ್ಬರಿಗಿಂತ ಹೆಚ್ಚಿನವರು ಆಕ್ರಮಣ ಮಾಡಿದ್ದರೂ ನಾವು ಕಲಿತ ಸಮರ ಕಲೆಗಳ ಪಟ್ಟುಗಳು ಸಹಾಯ ಮಾಡುತ್ತವೆ ಎನ್ನುವುದು ನಂಬಲು ಕಷ್ಟ. ಇನ್ನುಳಿದಂತೆ ಪ್ರಗತಿಪರರು ಕೂಗಿಕೊಳ್ಳುವ ಮಹಿಳಾ ದೌರ್ಜನ್ಯವು ಪುರುಷ ಪ್ರಧಾನ ವ್ಯವಸ್ಥೆಯ ಫಲಿತಾಂಶ ಎನ್ನುವುದು ಕೂಡ ಅರ್ಥಹೀನ ವಿತಂಡವಾದವಾಗಿ ಬಿಡುತ್ತದೆ. ಅವಳ ಜಾಗದಲ್ಲಿ ಪುರುಷನಾದ ನಾನಿದ್ದರೂ, ಆಕ್ರಮಣಕ್ಕೆ, ಲೂಟಿಗೆ ಗುರಿಯಾಗುವ ಸಂಭವ ಹೆಚ್ಚು ಎನ್ನುವ ಪ್ರಮೇಯವಿದ್ದಾಗ ಪ್ರಗತಿಪರರ ವಾದ ಹಳಸಲಾಗುತ್ತದೆ.
ಇನ್ನೊಂದು ಘಟನೆ, ಪತ್ರಿಕೆಯಲ್ಲಿ ಓದಿದ್ದಿದು. ಹಾಸನ ಕಡೆಯ ಒಬ್ಬ ಹುಡುಗಿ, ಹುಡುಗನನ್ನು ಪ್ರೀತಿಸುತ್ತಾಳೆ, ಪೋಷಕರಿಗೆ ಗೊತ್ತಾಗಿ, ಇಬ್ಬರ ಮದುವೆಗೆ ಅಂಗೀಕಾರ ಸಿಗದಿದ್ದಾಗ ಪರಸ್ಪರ ಬೇರೆಯಾಗುತ್ತಾರೆ. ಅವಳಿಗೆ ಬೇರೆ ಹುಡುಗನೊಂದಿಗೆ ಮದುವೆ ಗೊತ್ತಾದಾಗ ಅದನ್ನು ಅವಳು ಮೊದಲು ತನ್ನ ಹಿಂದಿನ ಪ್ರಿಯಕರನಿಗೆ ತಿಳಿಸುತ್ತಾಳೆ. ಅವನು ಕೊನೆಯ ಬಾರಿ ಅವಳನ್ನು ಭೇಟಿಯಾಗಲು ಬಯಸಿ, ಒಬ್ಬಳಿಗೇ, ಯಾರಿಗೂ ಹೇಳದೇ ಬರಲು ಹೇಳುತ್ತಾನೆ. ಇಬ್ಬರೂ ಮೇಕೆದಾಟುವಿನ ಹತ್ತಿರದ ಕಾಡಿನಲ್ಲಿ ತಮ್ಮ ಅಂತಿಮ ಭೇಟಿಗೆ ತೆರೆಯೆಳೆಯಲು ಬಯಸುತ್ತಾರೆ. ಪೆದ್ದು ಹುಡುಗಿ ಅದಕ್ಕೊಪ್ಪಿ, ಅವನ ಜೊತೆಗೆ ಮೇಕೆದಾಟುವಿಗೆ ಹೋದವಳು ಪುನಃ ಬರಲಿಲ್ಲ. ಆ ಭೇಟಿಯನ್ನೇ ಅವಳ ಅಂತ್ಯಕ್ಕೆ ಎಳೆ ತಂದಿದ್ದ ಆ ಹುಡುಗ ಕೊನೆಗೆ ತುಂಬಾ ದಿನಗಳ ನಂತರ ಪೊಲೀಸರಿಗೆ ಸಿಕ್ಕಿದ. ಹೀಗೆ, ಯಾರಿಗೂ ಹೇಳಬೇಡವೆಂಬ ಮಾತಿನ ಹಿಂದಿನದು ಅಪಾಯದ ಮುನ್ಸೂಚನೆ ಎಂದಾಗಲಿ, ಮಾಜಿ ಪ್ರಿಯಕರನ ಭೇಟಿಯ ಅಗತ್ಯವೇ ಇರದ ಸಂದರ್ಭದಲ್ಲಿ ಅವನೊಂದಿಗೆ ಒಬ್ಬಳೇ ನಿರ್ಜನ ಪ್ರದೇಶಕ್ಕೆ ಹೋಗುವ ಅನಿವಾರ್ಯತೆಯೇನಿರಬಹುದು ಎನ್ನುವುದನ್ನು ಊಹಿಸಿಕೊಳ್ಳದ ಅವಳ ವಿಮರ್ಶಾತ್ಮಕ ಅಲೋಚನೆಯ ಕೊರತೆ ಅವಳಿಗೇ ಮುಳುವಾಯಿತು ಎನ್ನಲು ಅಡ್ಡಿಯಿಲ್ಲ. ಬಹುಶಃ ಪೋಷಕರಿಗೆ ಹೇಳಿಕೊಂಡಿದ್ದರೆ, ಯಾರಾದರೂ ಅವಳಿಗೆ ಯೋಚಿಸಿ ನಿರ್ಧಾರ ತೆಗೆದುಕೋ ಎನ್ನುತ್ತಿದ್ದರೇನೋ ಅಥವಾ ನಾನು ಹೇಳಿ ಬಂದಿದ್ದೇನೆ ಎನ್ನುವುದು ಅವಳ ಪ್ರಿಯಕರನಿಗೂ ಗೊತ್ತಾದಾಗ, ಕಥೆ ಬೇರೆಯಾಗುವ ಸಂದರ್ಭವಿರುತ್ತಿತ್ತು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಗಮನಿಸಿದರೆ ಎಲ್ಲೋ ಒಂದು ಕಡೆ, ನಾವು ಮಹಿಳೆಯರಿಗೆ ವಿಮರ್ಶಾತ್ಮಕ ಆಲೋಚನೆಯನ್ನು ಕಲಿಸುವಲ್ಲಿ ಅಥವಾ ಮಹಿಳೆಯರು ಅದನ್ನು ಅಳವಡಿಸಿಕೊಳ್ಳುವುದರಲ್ಲಿ ಸೋತಿದ್ದಾರಾ ಎನ್ನುವ ಪ್ರಶ್ನೆಯು ಹುಟ್ಟುತ್ತದೆ.
ಹಿಂದಿಗಿಂತಲೂ ಇಂದು ಅದರ ಅಗತ್ಯ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಆಧುನಿಕ ವಿದ್ಯಾಭ್ಯಾಸವನ್ನು ಕಲಿಸುವ ಗುಂಗಿನಲ್ಲಿ, ನಮ್ಮ ಜೀವನಕ್ಕೆ ಅತ್ಯಗತ್ಯವಾದ ವಿಮರ್ಶಾತ್ಮಕ ಆಲೋಚನೆ ಎಂಬ ಜೀವನ ಕೌಶಲ್ಯವನ್ನು ಕಲಿಸುವಲ್ಲಿ ಹಿಂದಿದ್ದೇವೆ ಎಂದನಿಸದೆ ಇರಲಾರದು. ರಾಮಾಯಣ-ಮಹಾಭಾರತದಂತಹ ಮಹಾಕಾವ್ಯಗಳ ಅನೇಕ ಪಾತ್ರಗಳ ಆಂತರ್ಯದಲ್ಲಿ, ಪಂಚತಂತ್ರ ಕಥೆಗಳಲ್ಲಿ ವಿಮರ್ಶಾತ್ಮಕ ಆಲೋಚನೆಗಳ ಮಹಾಪೂರವೇ ಇದೆ. ಆದರೆ ನಮ್ಮದೆಲ್ಲವೂ ಕೆಟ್ಟದ್ದು, ಬಿಳಿಯರು ಕೊಟ್ಟ ವಿದ್ಯಾಭ್ಯಾಸದಲ್ಲಿ ಮಾತ್ರ ಪ್ರಗತಿಪರ ಚಿಂತನೆಯಿದೆ ಎಂದು ನಂಬಿಸಲು ಹೊರಟಿದ್ದ ಜನಗಳಿಂದ, ವೈಯಕ್ತಿಕ ಹಕ್ಕುಗಳೇ ಮುಖ್ಯ, ಉಳಿದೆಲ್ಲವು ನಗಣ್ಯ ಎಂಬ ಪಾಶ್ಚಿಮಾತ್ಯರ ಆಧುನಿಕ ಚಿಂತನೆಯಿಂದ ನಮ್ಮಲ್ಲಿ ಪರಂಪರಾಗತವಾಗಿ ಬಂದ ಸಾಂಸ್ಕೃತಿಕ ಅರಿವಿನ ಮರೆವು ಕೂಡ ಈ ಆಲೋಚನೆಗಳನ್ನು ಅಳವಡಿಸಿಕೊಳ್ಳುವುದರಲ್ಲಿ ನಾವು ಸೋತಿದ್ದೇವೆ ಎನ್ನುವುದು ನನ್ನ ಅನಿಸಿಕೆ.
ವಿಮರ್ಶಾತ್ಮಕ ಆಲೋಚನೆ ಮಹಿಳೆಯರಿಗೆ ಎಷ್ಟು ಮುಖ್ಯವೋ ಅಷ್ಟೇ ಪುರುಷರಿಗೂ, ಉಳಿದವರಿಗೂ ಮುಖ್ಯ. ಆದರೆ ಮಹಿಳಾ ಸುರಕ್ಷತೆಯ ಹಿನ್ನಲೆಯಲ್ಲಿನ ಲೇಖನವಾದ್ದರಿಂದ ಮಹಿಳೆಯರ ಬಗ್ಗೆ ಬರೆಯಬೇಕಾಯಿತೇ ಹೊರತು ಅನ್ಯಥಾ ಭಾವನೆಯಿಲ್ಲ.