ಶಿವಮೊಗ್ಗ: ಹಿಂದುಳಿದವರು, ದಲಿತರನ್ನು ಊರುಗೋಲಾಗಿಸಿಕೊಂಡು ಬೆಳೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾತಿಗಣತಿ ವರದಿ ಜಾರಿಗೆ ತರಬೇಕು, ಇಲ್ಲವಾದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಬಹಿರಂಗ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂಗೆ ಈ ಕುರಿತು ಬಹಿರಂತ ಪತ್ರ ಬರೆದಿದ್ದೇನೆ. ಹಿಂದುಳಿದವರು, ದಲಿತರನ್ನು ಬೆದರುಗೊಂಬೆ ಮಾಡಿಕೊಂಡು ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ಸಿಎಂ ಸ್ಥಾನ ಪಣಕ್ಕಿಟ್ಟು ನಾನು ಹಾಕಿರುವ ಸವಾಲು ಸ್ವೀಕರಿಸಲಿ ಎಂದರು.
೨೦೧೩-೧೮ರ ಅವಧಿಯಲ್ಲಿ ವಿಧಾನ ಮಂಡಲದ ಅಧಿವೇಶನದಲ್ಲಿ ನಾನು ಪರಿಷತ್ತಿನ ವಿರೋಧ ಪಕ್ಷದ ನಾಯಕನಾಗಿದ್ದಾಗ, ಕಾಂತ್‌ರಾಜ್ ವರದಿ ಜಾರಿಗೆ ಒತ್ತಾಯಿಸಿದಾಗ ಅಂದಿನ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಜಾತಿಗಣತಿ ವರದಿಯನ್ನು ಮಂಡಿಸುವುದಾಗಿ ಒಪ್ಪಿಕೊಂಡಿದ್ದರು. ಮುಖ್ಯಮಂತ್ರಿಗಳೇ ಮೇಲ್ಮನೆಗೆ ಬಂದು ಸ್ಪಷ್ಟನೆ ನೀಡಬೇಕೆಂದು ನಾನು ಹಠ ಹಿಡಿದಾಗ, ಪರಿಷತ್ತಿಗೇ ಬಂದು ವರದಿ ಮಂಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ವರದಿ ಬಂದು ೧೦ ವರ್ಷವಾದರೂ ಇನ್ನೂ ಜಾರಿಗೆ ತಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ವರದಿಗೆ ೧೬೦ ಕೋಟಿ ರೂ. ವ್ಯಯ ಮಾಡಿದ್ದು, ನೀರಲ್ಲಿ ಹುಣಸೇ ಹುಳಿ ಹಿಂಡಿದ ಹಾಗೆ ಆಗಿದೆ. ಈಗ ಹೊಸದಾಗಿ ಜಾತಿ ಗಣತಿಗೆ ನಿಮ್ಮ ಬಳಿ ಹಣವೂ ಇಲ್ಲ. ಹೀಗಾಗಿ ನಿಮಗೆ ಮನಸ್ಸಿದ್ದರೆ ಹೈಕಮಾಂಡ್ ಒತ್ತಡ ತಿರಸ್ಕರಿಸಿ, ತಕ್ಷಣ ಕಾಂತ್‌ರಾಜ್ ವರದಿ ಜಾರಿಗೊಳಿಸಿ. ಮುಖ್ಯಮಂತ್ರಿ ಸ್ಥಾನವನ್ನು ಬಲಿ ಕೊಟ್ಟಾದರೂ ಈ ಸಮುದಾಯಗಳಿಗೆ ನ್ಯಾಯ ಒದಗಿಸಿ ಎಂದರು.