ಕಲಬುರಗಿ: ಸಿಎಂ ಬದಲಾವಣೆ ಇಲ್ಲ. ಸದ್ಯ ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ, ಅವರೇ ಮುಂದುವರಿಯುತ್ತಾರೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹಾದೇವಪ್ಪ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ ನಂತರ ಸಿಎಂ ಬದಲಾವಣೆ ಎನ್ನುವ ಹೆಚ್.ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿಶ್ವನಾಥ್‌ಗೆ ಹೈಕಮಾಂಡ್ ಯಾವಾಗ ಆ ರೀತಿ ಹೇಳಿದ್ರೋ ಗೊತ್ತಿಲ್ಲ. ಆದರೆ ಅಂತಹ ಪ್ರಸ್ತಾವನೆ ಸರ್ಕಾರದ ಮತ್ತು ಹೈಕಮಾಂಡ್ ಮುಂದೆ ಇಲ್ಲ. ಅವರಿಗೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ. ಅವರ ಹೇಳಿಕೆ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದರು.
ಬೆಂಗಳೂರು ಕಾಲ್ತುಳಿತ ದುರಂತಕ್ಕೆ ಸಿಎಂ, ಡಿಸಿಎಂ ನೇರ ಹೊಣೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ಅದು ತುಂಬಾ ಬಾಲಿಷ ಹೇಳಿಕೆ. ವಿಮಾನ ದುರಂತದಿಂದ ತುಂಬಾ ನೋವಾಗಿದೆ. ಆ ದುರಂತ ಆಗಬಾರದಿತ್ತು, ಆಗಿದೆ, ಅದಕ್ಕೆ ವಿಷಾದ ಇದೆ. ಅದರಲ್ಲಿನ ಲೋಪ ಕಂಡು ಹಿಡಿಯಲು ತನಿಖೆ ನಡೆಯುತ್ತಿದೆ. ಇದರಲ್ಲಿ ರಾಜಕೀಯ ಬೆರೆಸುವುದು ಮೂರ್ಖತನ. ಈ ಥರ ಘಟನೆ ಯುಪಿ ಸೇರಿ ಬೇರೆ ಬೇರೆ ಕಡೆ ಸಹ ನಡೆದಿವೆ. ಗುಜರಾತಿನಲ್ಲಿ ವಿಮಾನ ದುರಂತ ಆಗಿರುವಾಗ ನಾವು ಪ್ರಧಾನಿ ರಾಜೀನಾಮೆ ಕೇಳಿದ್ದಿವಾ? ಇಂತದ್ದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ವಿಜಯೇಂದ್ರಗೆ ತಿರುಗೇಟು ನೀಡಿದರು.