ಸಿಎಂ, ಡಿಸಿಎಂಗೆ ಕಾದು ಸುಸ್ತಾದ ಜನಸ್ತೋಮಕ್ಕೆ ಹಾಡಿನ ಮೂಲಕ ರಂಜಿಸಿದ ಶಾಸಕ

ದಾವಣಗೆರೆ: ‘ಗೊಂಬೆ ಹೇಳುತೈತೆ…, ಕಾಲವನ್ನು ತಡೆಯೋರು ಯಾರು ಇಲ್ಲ…’ ಎಂಬ ಗೀತೆಗಳನ್ನು ಹಾಡುವ ಮೂಲಕ ಬೆಳಗ್ಗೆಯಿಂದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬರುವಿಕೆಗಾಗಿ ಕಾದು ಕುಳಿತ್ತಿದ್ದ ಜನಸ್ತೋಮಕ್ಕೆ ಶಾಸಕ ಕೆ.ಎಸ್. ಬಸವಂತಪ್ಪ ಉತ್ಸಾಹದ ಟಾನಿಕ್ ನೀಡಿದರು.
ನಗರದ ಹೈಸ್ಕೂಲ್ ಮೈದಾನದಲ್ಲಿ 1,350 ಕೋಟಿ ರೂ. ವೆಚ್ಚದ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕೆಲವು ಕನ್ನಡ ಚಿತ್ರಗೀತೆಗಳನ್ನು ಹಾಡುವ ಮೂಲಕ ಬೆಳಗ್ಗೆಯಿಂದ ಕಾದು ಕುಳಿತು ಸುಸ್ತಾಗಿದ್ದ ಜನಸ್ತೋಮ, ಇನ್ನೇನು ಎದ್ದು ಹೋಗಬೇಕು ಎನ್ನುವಷ್ಟರಲ್ಲಿ ವೇದಿಕೆಗೆ ಆಗಮಿಸಿದ ಶಾಸಕ ಕೆ.ಎಸ್. ಬಸವಂತಪ್ಪ, ಮೈಕ್ ಹಿಡಿದು ಪುನೀತ್ ರಾಜ್‌ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ‘ಗೊಂಬೆ ಹೇಳುತೈತೆ.., ಕಾಲವನ್ನು ತಡೆಯೋರು ಯಾರು ಇಲ್ಲ.. ಎಂಬ ಗೀತೆಗಳನ್ನು ಹಾಡುವ ಮೂಲಕ ನಗುವಿನ ಚಿಲುಮೆ ಚಿಮ್ಮಿಸಿದರು.
ಇದಕ್ಕೂ ಮೊದಲ ಗಾಯಕರು ಬೆಳಗ್ಗೆಯಿಂದ ಕನ್ನಡ ಚಿತ್ರಗಳ ಕೆಲವು ಗೀತಗಳನ್ನು ಹಾಡಿ ಮನರಂಜಿಸಿದ್ದರು. ಅದರಲ್ಲಿ ಬಹುತೇಕ ಹಿಂದಿ ಚಿತ್ರಗೀತೆಗಳೇ ಇದ್ದವು. ಇದರಿಂದ ಜನಸ್ತೋಮ ಕೇಳಿ ಕೇಳಿ ಸುಸ್ತಾಗಿ ಕೊನೆಗೆ ಪ್ರತಿರೋಧ ಒಡ್ಡಿದರು. ಈ ವೇಳೆಗೆ ಆಗಮಿಸಿದ ಶಾಸಕ ಕೆ.ಎಸ್. ಬಸವಂತಪ್ಪ, ಕನ್ನಡ ಚಿತ್ರಗೀತೆಗಳನ್ನು ಹಾಡಿ ಜನರನ್ನು ತನ್ನತ್ತ ಸೆಳೆದರು. ಅಷ್ಟರೊಳಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಆಗಮಿಸುತ್ತಿದ್ದಂತೆ ಗಮನ ಅವರತ್ತ ಸೆಳೆಯಿತು.