ಸಿಂಧೂರ ಭಾರತ ತಲುಪಿದೆ ಬಹುದೂರ

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪ್ರತಿಬಾರಿಯೂ ಉಗ್ರರ ದಾಳಿಯಾದಾಗ ಅಸಹಾಯಕ ಸ್ಥಿತಿಯಲ್ಲಿ ಅಮೇರಿಕದತ್ತ ಮುಖ ಮಾಡುತ್ತಿದ್ದ ಭಾರತದ ಆಡಳಿತದ `ನರಸಿಂಹ ಅವತಾರ’ಕ್ಕೆ ಆಪರೇಷನ್ ಸಿಂಧೂರ ಸಾಕ್ಷಿಯಾಗಿದೆ. ಜನಸಂಖ್ಯೆಯಲ್ಲಿ ಹಿರಿದಾದರೂ, ಭಯೋತ್ಪಾದಕರ ದಾಳಿಗೆ ಮಂಕಾಗಿ ನಿಸ್ತೇಜಗೊಂಡು ನಿತ್ರಾಣ ಮತ್ತು ಕ್ಷೀಣ ಧ್ವನಿಯಲ್ಲಿ ಮಾಧ್ಯಮದೆದುರು ಕಾಣುತ್ತಿದ್ದ ಭಾರತದ ಹೊಸ ಅಧ್ಯಾಯಕ್ಕೆ ಜಗತ್ತೇ ನಿಬ್ಬೆರಗಾಗಿದೆ. ಕಾಶ್ಮೀರವನ್ನು ಗುರಿಯಾಗಿಸಿ ಕಳೆದ ಏಳು ದಶಕಗಳಿಂದ ಭಾರತವನ್ನು ಆಟವಾಡಿಸುತ್ತಿದ್ದ ಪಾಕಿಸ್ತಾನದ ಸೊಕ್ಕು, ಧಿಮಾಕು, ಭಂಡತನ, ಕಪಟ ಮತ್ತು ಸುಳ್ಳಿನ ಅರಮನೆ ಸುಟ್ಟು ಬೂದಿಯಾದುದು ಹೆಮ್ಮೆಯ ಸಂಗತಿ. ಹಿಂದುಸ್ತಾನವನ್ನು ಕೆಣಕಿ, ರಕ್ತದೋಕುಳಿ ಹರಿಸಿ ಖುಷಿಪಡುತ್ತಿದ್ದ ಉಗ್ರರಂತೂ ತಂಪು ನೀರಿನಾಳದಲ್ಲೂ ಬೆವರುತ್ತಿರುವುದು ನವಭಾರತದ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ. ಸರಕಾರಿ ಗೌರವದೊಂದಿಗೆ ಉಗ್ರರ ದಫನ ಮಾಡುವ ಪಾಕಿಸ್ತಾನದ ಹೀನ ನಡೆಯೇ ಅದು ಅಂತಾರಾಷ್ಟ್ರೀಯ ಭಯೋತ್ಪಾದನಾ ತವರು ಮನೆಯೆಂಬ ಸತ್ಯಕ್ಕೆ ಸ್ಪಷ್ಟ ಸಾಕ್ಷಿ. ರಾತೋರಾತ್ರಿ ನಡೆದ ಕಾರ್ಯಾಚರಣೆಗೆ ನೆಲೆ ಕಳೆದುಕೊಂಡ ಪಾಕ್ ಆಡಳಿತವು ಕಣ್ತೆರೆಯುವಷ್ಟರಲ್ಲಿ ಸಿಂಧುವಿಗೆ ಸಿಂಧೂರವಿಟ್ಟು ಗೆಲುವಿನ ನಗೆ ಬೀರಿದ ಭಾರತದ ಸೇನೆ, ಜಾಗತಿಕ ಸಮರೇತಿಹಾಸದ ಅಚ್ಚಳಿಯದ ಅದ್ಭುತ ವಿದ್ಯಮಾನಗಳ ಹೊತ್ತಗೆಯ ಪ್ರಥಮ ಪುಟದಲ್ಲಿ ತನ್ನ ಸಾಹಸಗಾಥೆ ಬರೆಯಿತು.
ಅಷ್ಟಕ್ಕೂ ಆಪರೇಷನ್ ಸಿಂಧೂರ ಕೇವಲ ಪಾಕಿಸ್ತಾನವನ್ನಷ್ಟೇ ಬೆತ್ತಲುಗೊಳಿಸಿದೆಯೆಂದರೆ ಅದು ತಪ್ಪು ನಿರ್ಣಯ. ಹೌದು. ಈ ಕಾರ್ಯಾಚರಣೆಯು ನ್ಯೂಕ್ಲಿಯರ್ ಶಕ್ತಿಯ ಬಗ್ಗೆ ಭೀತಿ ಹುಟ್ಟಿಸಿ, ಕಾಗಕ್ಕ ಗುಬ್ಬಕ್ಕ ಕಥೆ ಹೇಳುತ್ತಿದ್ದ ಪಾಕ್ ಸೇನಾಗರ್ಭವನ್ನೇ ಬ್ರಹ್ಮೋಸ್ ಮೂಲಕ ಅಸ್ಥಿರಗೊಳಿಸಿದೆ, ಶತ್ರುನೆಲದ ಅತಿಪ್ರಮುಖ ಹನ್ನೊಂದು ಸೇನಾನೆಲೆಗಳನ್ನು ಮತ್ತು ಉಗ್ರ ಶಿಬಿರಗಳನ್ನು ಧ್ವಂಸಗೈದು ನೂರಕ್ಕೂ ಹೆಚ್ಚು ಮಾನವತೆಯ ವಿರೋಧಿಗಳನ್ನು ಯಮಪುರಿಗಟ್ಟಿದೆ, ಮುಂದೆ ನಡೆಯುವ ಯಾವುದೇ ಉಗ್ರ ಕೃತ್ಯವೂ ದೇಶದ ಮೇಲೆ ನಡೆಯುವ ಯುದ್ಧವೆಂದೇ ಪರಿಗಣಿಸಲ್ಪಡುವ ನೀತಿ ಹೊರಹೊಮ್ಮಿದೆ, ಸುಳ್ಳು ಹೇಳಿಕೆಗಳ ಮೂಲಕವೇ ಜಾಗತಿಕ ಮಾಧ್ಯಮಗಳಲ್ಲಿ ಮಿಂಚುತ್ತಿದ್ದ ಪಾಕಿಸ್ತಾನದ ಬಣ್ಣ ಬಯಲಾಗಿದೆ. ಇವೆಲ್ಲವೂ ನಿಜ. ಆದರೆ ಅದಕ್ಕೂ ಮೀರಿದ ಇನ್ನಷ್ಟು ಸತ್ಯಗಳನ್ನೂ ಸಿಂಧೂರ ಹೊರಹಾಕಿದೆ. ಅರುಣಾಚಲ ಪ್ರದೇಶದ ಮೂಲಕ ತನ್ನ ಗಡಿಯನ್ನು ವಿಸ್ತರಿಸಿಕೊಳ್ಳುವ ತವಕದಲ್ಲಿರುವ ಮತ್ತು ಏಷ್ಯಾದಲ್ಲೇ ಪ್ರಬಲ ಆರ್ಥಿಕ ಪಾರಮ್ಯ ಮೆರೆಯುವ ದುರಾಲೋಚನೆಯುಳ್ಳ ಚೀನಾ, ಯಾವತ್ತೂ ಭಾರತದ ಪರವಲ್ಲವೆಂಬುದು ಮತ್ತೊಮ್ಮೆ ಸಾಬೀತಾಗಿದೆ. ಅದಕ್ಕೂ ಮಿಗಿಲಾಗಿ ಚೀನಾನಿರ್ಮಿತ ಯುದ್ಧಸಲಕರಣೆಗಳನ್ನು ಭಾರತ ಹೊಡೆದುರುಳಿಸಿರುವುದು ವೈಶ್ವಿಕ ಮಟ್ಟದಲ್ಲಿ ಚೀನಾವನ್ನು ಮಕಾಡೆ ಮಲಗಿಸಿದೆ. ಹಣಕಾಸಿನ ನೆರವನ್ನಿತ್ತು ಪರೋಕ್ಷವಾಗಿ ಉಗ್ರವಾದವನ್ನು ಬೆಂಬಲಿಸುವ ಚೀನಾದ ಅಸಲಿಯತ್ತು ಜಗತ್ತಿಗೆ ತಿಳಿದು, ತನ್ನ ಮಾರುಕಟ್ಟೆಯನ್ನು ಹತ್ತನೇ ಒಂದು ಭಾಗ ಕಳೆದುಕೊಂಡು ವಿಲವಿಲ ಒದ್ದಾಡುತ್ತಿದೆ.
ಚುನಾವಣಾ ಪ್ರಚಾರದಲ್ಲಿ ಭಾರತ ಮತ್ತು ಹಿಂದೂಗಳನ್ನು ವಿಶೇಷವಾಗಿ ಅಭಿನಂದಿಸಿ, ತಾನು ಭಾರತದ ಪರಮಾಪ್ತನೆಂದು ತೋರ್ಪಡಿಸುತ್ತಿದ್ದ ಅಮೇರಿಕಾದ ಅಡ್ಡಗೋಡೆಯ ಮೇಲಿಟ್ಟ ದೀಪದ ಮಾತು ಕೂಡ ಯೋಚಿಸಬೇಕಾದ್ದೇ. ಅಮೇರಿಕಾ ನಿರ್ಮಿತ ಫೈಟರ್ ಜೆಟ್ ಉರುಳಿ ಬಿದ್ದುದನ್ನು ಕಂಡ ಟ್ರಂಪ್, ವ್ಯವಹಾರಕ್ಕಿಂತ ದೊಡ್ಡದು ಬೇರೇನೂ ಇಲ್ಲವೆಂಬ ಸತ್ಯಕ್ಕೆ ಸಹಿ ಹಾಕಿದ್ದು ಸರ್ವವಿದಿತ. ಬೇರೆ ದೇಶಗಳ ಆಂತರಿಕ ವಿಚಾರಗಳಲ್ಲಿ ಸದಾ ಮೂಗು ತೂರಿಸಿ ಲಾಭ ಪಡೆಯುತ್ತಿದ್ದ ಯುಎಸ್‌ಎಗೆ ಮೊದಲಬಾರಿಗೆ ಭಾರತ ನಯವಾಗಿಯೇ ತಿರುಗೇಟು ನೀಡಿದೆ. ತನ್ನ ನೆಲದ ವಿಚಾರಗಳಿಗೆ ಯಾರ ಮಧ್ಯಸ್ಥಿಕೆಯ ಅಗತ್ಯವೂ ಇಲ್ಲವೆಂಬ ಮೋದಿನಿಲುವು ಟ್ರಂಪ್ ಮತ್ತವರ ಸಹಚರರಿಗೆ ಅನಿರೀಕ್ಷಿತ ಬಿಸಿತುಪ್ಪ. ಎರಡು ವರ್ಷಗಳ ಹಿಂದಷ್ಟೇ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಟರ್ಕಿಗೆ ಬೇಕುಬೇಕಾದ ಸಹಾಯ ಮಾಡಿದ್ದ ಭಾರತದ ಉಪಕಾರವನ್ನು ಕಿಂಚಿತ್ತೂ ಸ್ಮರಿಸದ ಆ ನೆಲ, ಪಾಕಿಸ್ತಾನಕ್ಕೆ ಡ್ರೋನ್ ಒದಗಿಸಿದ್ದಷ್ಟೇ ಅಲ್ಲದೆ ಸಂಭವನೀಯ ಯುದ್ಧಕ್ಕೆ ಬೇಕಾದ ಪೂರ್ವತಯಾರಿಯಲ್ಲೂ ತೊಡಗಿತ್ತು. ವಿವಿಧ ವ್ಯಾಪಾರ ವಹಿವಾಟಿನ ಮೂಲಕ ಭಾರತದಿಂದ ದೊಡ್ಡ ಲಾಭ ಮಾಡಿಕೊಳ್ಳುತ್ತಿದ್ದ ಟರ್ಕಿಯ ಗೂಢನಡೆ ಅಪಾಯದ ಕರೆಗಂಟೆ. ಹಾಗೆಯೇ ನಮ್ಮ ಅನ್ನ ತಿಂದ ಟರ್ಕಿ, ಬಾಂಗ್ಲಾದ ಧೂರ್ತತೆ ಭಾರತೀಯರ ಔದಾರ್ಯಗುಣಕ್ಕೊಂದು ಸೊಗಸಾದ ಪಾಠವೂ ಹೌದು.
ಎಲ್ಲಾ ದೇಶಗಳನ್ನೂ ಸಮಾನವಾಗಿ ನೋಡಬೇಕಾದ ಜವಾಬ್ದಾರಿಯಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಪಹಲ್ಗಾಮ್ ದಾಳಿಯ ತರುವಾಯ ಪಾಕಿಸ್ತಾನಕ್ಕೆ ಸಾಲ ನೀಡಿರುವುದು ಗಂಭೀರ ಸಂಗತಿ. ಈ ಹಿಂದೆ ೧೯೭೧ ಮತ್ತು ೧೯೯೯ರಲ್ಲೂ ಭಾರತದ ವಿರುದ್ಧ ಪಾಕಿಸ್ತಾನ ದಾಳಿ ನಡೆಸುತ್ತಿದ್ದಂತೆ ಅದರ ಖಾತೆಗೆ ಕೋಟಿಕೋಟಿ ಜಮೆ ಮಾಡಿದ್ದ ಐಎಮ್‌ಎಫ್, ತಾನು ಯಾವುದರ ಪರ ಎಂಬುದನ್ನು ಸ್ಪಷ್ಟಪಡಿಸಿದೆ. ರಷ್ಯಾ ಮತ್ತು ಇಸ್ರೇಲ್ ಹೊರತುಪಡಿಸಿ ಪ್ರಪಂಚದ ಬಹುತೇಕ ರಾಷ್ಟçಗಳು ಭಾರತದ ವಿರುದ್ಧ ಅಥವಾ ತಟಸ್ಥ ನೀತಿಯನ್ನೇ ಅನುಸರಿಸುತ್ತವೆ. ಕೆನಡಾ, ಬ್ರಿಟನ್, ಚೀನಾ, ಅಮೇರಿಕಾ ಇತ್ಯಾದಿ ದೇಶಗಳ ಯುದ್ಧಸಲಕರಣೆಗಳ ಮಾರುಕಟ್ಟೆಗೆ ನೇರವಾಗಿ ಲಗ್ಗೆ ಹಾಕುತ್ತಿರುವ ಭಾರತ ಸ್ವಸಾಮರ್ಥ್ಯದಿಂದ ಹೊರಹೊಮ್ಮುವುದು ಪಶ್ಚಿಮದ ಅನೇಕ ನಾಯಕರಿಗೆ ಅರಗಿಸಿಕೊಳ್ಳುವುದೇ ಕಷ್ಟ. ಇದುವರೆಗೆ ಪಾಶ್ಚಿಮಾತ್ಯ ಶಸ್ತಾçಸ್ತç ಲಾಬಿಗೆ ಹೂಂಗುಟ್ಟುತ್ತಿದ್ದ ಭಾರತ ಈಗ ತನ್ನದೇ ಆಯುಧಗಳೊಂದಿಗೆ ಹೂಂಕರಿಸುತ್ತಿರುವುದೇ ವಿದೇಶಗಳ ಸಮಸ್ಯೆ. ಹಾಗೆಯೇ, ಹಮಾಸ್ – ಪ್ಯಾಲೆಸ್ಟೆನ್ ಉಗ್ರರ ವಿರುದ್ಧ ಇಸ್ರೇಲ್ ಸಿಡಿದೆದ್ದಾಗ ಪುಂಖಾನುಪುಂಖ ಶಾಂತಿಯ ಪಾಠ ಮಾಡಿ, ಕ್ಯಾಂಡಲ್ ಹಿಡಿದ ತಥಾಕಥಿತ ಸೆಲೆಬ್ರಿಟಿಗಳು, ಹಿಂದೂ ನರಮೇಧ ನಡೆದಾಗ ನರಸತ್ತವರಂತೆ ಸುಮ್ಮನಿದ್ದು ಆಪರೇಷನ್ ಸಿಂಧೂರದ ಯಶಸ್ಸನ್ನು ಸಂಭ್ರಮಿಸುವ ಗೋಜಿಗೆ ಹೋಗದ್ದು ಮುಖವಾಡ ಕಳಚುವ ದೃಷ್ಟಿಯಿಂದ ಒಳ್ಳೆಯದೇ ಎಂದು ಭಾವಿಸೋಣ.
ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ನಡೆದಾಗಲೇ ಭಾರತೀಯ ಸೇನೆಯ ಬಗ್ಗೆ ಅಪರಿಮಿತ ವಿಶ್ವಾಸ ಮೂಡಿದ್ದರೂ, ಆಪರೇಷನ್ ಸಿಂಧೂರವು ಭಾರತದ ಮಾನವ ರಹಿತ ಕಾರ್ಯಾಚರಣೆಯ ವಿರಾಡ್ರೂಪವನ್ನೇ ವಿಶ್ವಕ್ಕೆ ಪರಿಚಯಿಸಿದೆ. ರಷ್ಯಾದ ತಂತ್ರಜ್ಞಾನಕ್ಕೆ ಭಾರತದ ಬುದ್ಧಿಮತ್ತೆಯ ವಿಜ್ಞಾನವನ್ನು ಅನುಸಂಧಾನಗೊಳಿಸಿದ ಪ್ರಕ್ರಿಯೆಯಂತೂ ಹಿಂದುಸ್ತಾನದ ಪ್ರಬಲ ಶಕ್ತಿಗೆ ಜ್ವಲಂತ ಉದಾಹರಣೆ. ಕರಾರುವಾಕ್ಕಾದ ನಮ್ಮ ಉಪಗ್ರಹ ವ್ಯವಸ್ಥೆ, ನಿಖರ ಗುರಿಯಿಟ್ಟು ಶತ್ರುವನ್ನು ಹೊಡೆದುರುಳಿಸುವ ಕಲೆ, ಆತ್ಮನಿರ್ಭರತೆಯ ಮೊದಲ ಹೆಜ್ಜೆಯಾಗಿ ತಯಾರಾಗುತ್ತಿರುವ ಬ್ರಹ್ಮೋಸ್ – ವಿಕ್ರಾಂತ್ – ಭಾರ್ಗವ ಮೊದಲಾದ ದೇಸೀ ಶಸ್ತ್ರಕೋಠಿಗಳು ಜನಸಾಮಾನ್ಯರ ಪಾಲಿಗೆ ಹೊಸ ಭರವಸೆಯನ್ನೇ ಮೂಡಿಸಿದೆ. ಸಿಂಧೂರ ಅತ್ಯಲ್ಪಕಾಲದ ಕಾರ್ಯಾಚರಣೆಯಾದರೂ ಅದರ ಪ್ರಭಾವದಿಂದ ಭಾರತವು ಊಹಿಸಲಾಗದಷ್ಟು ದೂರ ಸಾಗಿರುವುದನ್ನು ಇಂದಲ್ಲ ನಾಳೆ ಜಗತ್ತು ಒಪ್ಪಲೇಬೇಕು.