ಕೀರ್ತಿಶೇಖರ, ಕಾಸರಗೋಡು
ಬೆಳಗಾವಿ: ಸಂಧ್ಯಾಕಾಲದಲ್ಲಿ ಹಿರಿಜೀವಗಳಿಗೆ ಶಾಂತಿ-ನೆಮ್ಮದಿಯಲ್ಲಿ ಎರಡು ಹೊತ್ತು ಊಟ ಮಾಡುವುದಕ್ಕೆ ಯಾವುದೇ ತೊಂದರೆಯಾಗಬಾರದು ಎಂದು ರಾಜ್ಯ ಸರ್ಕಾರ ಹಲವು ಯೋಜನೆ
ಜಾರಿಗೆ ತಂದಿದೆ. ಆದರೆ ಈ ಎಲ್ಲಾ ಸವಲತ್ತುಗಳ ಪರಿವೆಯೇ ಇಲ್ಲದೆ ಅದೆಷ್ಟೋ ವೃದ್ಧರು ಇಂದಿಗೂ ಒಪ್ಪೊತ್ತಿನ ಊಟಕ್ಕೆ ಪರದಾಡುವ ಪರಿಸ್ಥಿತಿ ನಮ್ಮಲ್ಲಿದೆ.
ಆಧುನಿಕ ಕುಟುಂಬ ಜೀವನ ಶೈಲಿ, ಆರ್ಥಿಕ ಒತ್ತಡ, ಪರಂಪರೆಯ ಬದಲಾವಣೆಗಳು ಸಮಾಜದಲ್ಲಿ ವೃದ್ಧರ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. ಹಾಗಾಗಿಯೇ ಮನೆಯಿಂದ ಹೊರದಬ್ಬಿದ ಅದೆಷ್ಟೋ
ಹಿರಿಜೀವಗಳು ಬೀದಿ ಬೀದಿಗಳಲ್ಲಿ ಅಲೆದಾಡುತ್ತಾ, ಅಲ್ಲಿಯೇ ಆಶ್ರಯ ಪಡುತ್ತಿರುವುದನ್ನು ನಾವು ಕಾಣುತ್ತೇವೆ.
ಮಕ್ಕಳಿಗಾಗಿ ಹರಕೆ ಹೊತ್ತು ಅವರನ್ನು ಸಾಕಿ ಸಲಹಿ ದೊಡ್ಡವರನ್ನಾಗಿಸಿದ ನಂತರ ಅಪ್ಪ-ಅಮ್ಮನೇ ಮಕ್ಕಳಿಗೆ ಹೊರೆಯಾಗುತ್ತಾರೆ. ಇವರ ಆಸ್ತಿ-ಹಣವನ್ನೆಲ್ಲಾ ಕಸಿದುಕೊಂಡು ಮನೆಯಿಂದ ಹೊರದಬ್ಬುವ ಘಟನೆಗಳು ಇಂದು ಸಾಮಾನ್ಯವೆಂಬಂತಾಗಿದೆ. ನಿಮಗೆ ನೆನಪಿದೆಯೋ ಏನೋ ಮರ‍್ನಾಲ್ಕು ವರ್ಷಗಳ ಹಿಂದೆ ಬೆಳಗಾವಿ ಜಿಲ್ಲಾಧಿಕಾರಿಯವರ ಮಧ್ಯಪ್ರವೇಶದಿಂದ
ಅಧಿಕಾರಿಯೊಬ್ಬರ ಅಶ್ರಯರಹಿತ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದ ಘಟನೆಗೆ ಬೆಳಗಾವಿ ಸಾಕ್ಷಿಯಾಗಿತ್ತು. ಸಮಾಜ ಸೇವಕಿಯೊಬ್ಬರು ಮುಂದೆ ನಿಂತು ಈ ಹಿರಿಜೀವಕ್ಕೆ ನ್ಯಾಯ ಸಿಗಬೇಕೆಂದು ಹೋರಾಡಿದ್ದರು. ಆಗ ಇದು ಸಾಕಷ್ಟು ವೈರಲ್ ಆಗಿತ್ತು. ಆದರೆ ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚುತ್ತಲೇ ಇದೆ. ಸರ್ಕಾರದಿಂದ ವೃದ್ಧಾಶ್ರಮವೊಂದನ್ನು ತೆರೆದರೆ ಇಂತಹ ನಿರಾಶ್ರಿತ ಹಿರಿ ಜೀವಗಳಿಗೆ ಆಸರೆ ಸಿಕ್ಕಂತಾಗಬಹುದು.
ಅಂದಹಾಗೆ ತುಂಬಿದ ಕುಟುಂಬದ ಕನಸು ಕಂಡು ಮೊಮ್ಮಕ್ಕಳು, ಮರಿಮಕ್ಕಳ ಜತೆ ಆಟವಾಡುವ ಕನಸು ಕಾಣುತ್ತಿರುವ ಈ ಹಿರಿಜೀವಗಳನ್ನು ಚಿಕಿತ್ಸೆಯ ನೆಪದಲ್ಲಿ ಜಿಲ್ಲಾಸ್ಪತ್ರೆಗೆ(ಬಿಮ್ಸ್) ತಂದು ದಾಖಲಿಸಿ ನಂತರ ಅಲ್ಲಿಂದ ಕಾಲ್ಕೀಳುವ ಮಕ್ಕಳ ಸಂಖ್ಯೆ ಇಂದು ಹೆಚ್ಚಾಗಿದೆ. ಹೀಗೆ ಆಶ್ರಯ ಹೀನರಾಗಿರುವ ಹಿರಿಯ ನಾಗರಿಕರಲ್ಲಿ ತೀವ್ರ ಮಾನಸಿಕ ಒತ್ತಡ, ಶಾರೀರಿಕ ತ್ರಾಸು ಕಂಡು ಬರುತ್ತಿದ್ದು, ಖಿನ್ನತೆಯಿಂದ ಮಾನಸಿಕ ಅಸ್ವಸ್ಥೆಗೆ ಒಳಗಾಗುವ ಸಾಧ್ಯತೆಯೂ ಇಲ್ಲದ್ದಿಲ್ಲ. ಇದೊಂಥರಾ ಮಾನವೀಯ ಹಕ್ಕುಗಳ ಉಲ್ಲಂಘನೆಯಾಗಿದ್ದರೂ ಕೂಡ ಇಂತಹ ಪರಿಸ್ಥಿತಿಗೆ ನೂಕಿದ ಮಕ್ಕಳ ವಿರುದ್ಧ ಇಂದಿಗೂ ಎಲ್ಲಿಯೂ ಕೇಸು ದಾಖಲಾಗಿಲ್ಲ ಎಂಬುದು ವಿಪರ್ಯಾಸ. ಸ್ಥಳೀಯ ಸಮಾಜ, ಸ್ವಯಂಸೇವಾ ಸಂಸ್ಥೆಗಳು, ಮತ್ತು ಸರ್ಕಾರ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿವೆ. ಆದರೆ, ಈ ಪ್ರಯತ್ನಗಳು ಸಮಗ್ರ ಪರಿಹಾರದತ್ತ ಇನ್ನೂ ದೂರದಲ್ಲಿವೆ.
ಜಿಲ್ಲಾಸ್ಪತ್ರೆಯಲ್ಲೇ ೬೨ ವೃದ್ಧರು:
ಕಳೆದ ೨ ವರ್ಷಗಳಲ್ಲಿ ೧೫೨ ವೃದ್ಧರನ್ನು ಅನಾರೋಗ್ಯಕ್ಕೀಡಾದ ಹಿನ್ನೆಲೆ ಅವರ ಮಕ್ಕಳು ಜಿಲ್ಲಾಸ್ಪತ್ರೆಯಲ್ಲೇ ಬಿಟ್ಟು ಹೋಗಿದ್ದಾರೆ. ಆಸ್ತಿ ಕಾಗದ ಪತ್ರಗಳಿಗೆ ಸಹಿ ಮಾಡಿಸಿಕೊಂಡು ಮೂಲ ಮಾಲೀಕರನ್ನೇ ಬೀದಿಪಾಲು ಮಾಡುತ್ತಿದ್ದಾರೆ. ತಮ್ಮ ತಂದೆ ತಾಯಿ ಗುಣಮುಖರಾದರೂ ಕೂಡ, ಅವರನ್ನು ಮನೆಗೆ ಕರೆದೊಯ್ಯದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಜಿಲ್ಲಾಸ್ಪತ್ರೆ ಪೊಲೀಸ್ ಇಲಾಖೆಯ ಮೂಲಕ ಮಕ್ಕಳನ್ನು ಸಂಪರ್ಕಿಸಿದರೂ, ತಮ್ಮ ಪೋಷಕರನ್ನು ಕರೆದುಕೊಂಡು ಹೋಗಲು ಬರುತ್ತಿಲ್ಲವೆಂಬುದು ವಿಪರ್ಯಾಸವೇ ಸರಿ.
ಈಗಾಗಲೇ ಹೊರ ರಾಜ್ಯದ ೧೭ ಜನರನ್ನು ಮತ್ತು ರಾಜ್ಯದ ವಿವಿಧೆಡೆಯ ೨೩ ಜನರನ್ನು ಅವರ ಮಕ್ಕಳ ಮನೆಗೆ ಕಳುಹಿಸಿಕೊಡಲಾಗಿದೆ. ಆದರೇ ಇನ್ನುಳಿದ ೬೨ ವೃದ್ಧರ ಮಕ್ಕಳಿದ್ದರೂ ಅನಾಥರಂತೆ ಕಣ್ಣೀರು ಹಾಕುತ್ತಿದ್ದಾರೆ. ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಬಿಮ್ಸ್ ಆರ್.ಎಂ.ಓ ಸರೋಜಿನಿ ಮಾಹಿತಿ ನೀಡಿದ್ದಾರೆ.
ಖಾಸಗಿ ವೃದ್ಧಾಶ್ರಮಗಳು ಫುಲ್
ಬೆಳಗಾವಿಯಲ್ಲಿ ಶಾಂತಾಯಿ ವೃದ್ಧಾಶ್ರಮ ಮುಂತಾದ ಸಂಸ್ಥೆಗಳು ವೃದ್ಧರಿಗೆ ಆಶ್ರಯ, ಆಹಾರ, ಮತ್ತು ಆರೈಕೆ ನೀಡುತ್ತಿವೆ. ಅನಾಥರಾಗಿರುವ ಹಿರಿಜೀವಗಳಿಗೆ ಉಚಿತವಾಗಿ ಆರೈಕೆ ಮಾಡಲಾಗುತ್ತದೆ. ಇನ್ನು ನಾಗನೂರು ಮಠದ ಆಶ್ರಯದಲ್ಲಿ ನಡೆಯುತ್ತಿರುವ ಬಸವನಕುಡಚಿಯ ವೃದ್ಧಾಶ್ರಮದಲ್ಲಿಯೂ ಹಿರಿಯ ನಾಗರಿಕರಿಗೆ ಸಮ್ಮಾನದ ಬದುಕು ಒದಗಿಸಲಾಗುತ್ತದೆ. ಇದಲ್ಲದೆ ಗಣೇಶಪುರದಲ್ಲಿರುವ ಗುರುಕಲ್ ಸೇರಿದಂತೆ ಠೇವಣಿ ಹಣ ಪಡೆದುಕೊಂಡು ಹಿರಿಯ ನಾಗರಿಕರನ್ನು ನೋಡಿಕೊಳ್ಳುವ ವೃದ್ಧಾಶ್ರಮಗಳು ಕೂಡಾ ಬೆಳಗಾವಿಯಲ್ಲಿದೆ. ಆದರೆ ಇಲ್ಲಿಯ ತನಕವೂ ಸರ್ಕಾರಿ ವೃದ್ಧಾಶ್ರಮಗಳು ಬೆಳಗಾವಿಯಲ್ಲಿ ಇಲ್ಲದೆ ಇರುವುದರಿಂದ ವೃದ್ಧರು ನಿರಾಶ್ರಿತರಾಗಿ ಬೀದಿಪಾಲಾಗುತ್ತಿರುವುದು ಸಾಮಾನ್ಯವಾಗಿದೆ. ಸಚಿವರು ಈ ಬಗ್ಗೆ ಗಮನ ಹರಿಸಬೇಕು.