ಸರ್ಕಾರ, ಕೂಡಲೇ ಪಲ್ಪ್ ಕೈಗಾರಿಕೆಗಳನ್ನು ಪ್ರಾರಂಭಿಸಲಿ

ಬೆಂಗಳೂರು: ಸರ್ಕಾರ, ಕೂಡಲೇ ಪಲ್ಪ್ ಕೈಗಾರಿಕೆಗಳನ್ನು ಪ್ರಾರಂಭಿಸಲಿ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆಗ್ರಹಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ದೇಶದಲ್ಲಿ ಅತಿ ಹೆಚ್ಚು ಮಾವಿನ ಹಣ್ಣುಗಳನ್ನು ಬೆಳೆಯುವ ರಾಜ್ಯಗಳಲ್ಲಿ ನಮ್ಮ ಕರ್ನಾಟಕ ಕೂಡ ಸೇರಿದೆ. ಸುಮಾರು 11 ಲಕ್ಷ ಟನ್ ಗಳಷ್ಟು ಮಾವಿನ ಹಣ್ಣನ್ನು ಬೆಳೆಯಲಾಗುತ್ತಿದೆ. ಇದರಲ್ಲಿ 4 ಲಕ್ಷ ಟನ್ ಮಾವಿನ ಹಣ್ಣನ್ನು ಗ್ರಾಹಕರಿಗೆ ನೇರವಾಗಿ ಮಾರಾಟವಾದರೆ, ಮಿಕ್ಕಿದ್ದು ಕೈಗಾರಿಕೆಗಳು ಮಾವಿನ ಉಪ ಉತ್ಪನ್ನಗಳನ್ನು ತಯಾರಿಸುವುದಕ್ಕೆ ಉಪಯೋಗಿಸುತ್ತದೆ.

ಮಾವು ಋತುಕಾಲಿಕ ಹಣ್ಣಾಗಿರುವುದರಿಂದ (seasonal fruit ) ಮಾವಿನ ಹಣ್ಣಿನ ತಿರುಳಿನಿಂದ (Pulp) ನಿಂದ ಅನೇಕ ಉಪ ಉತ್ಪನ್ನಗಳನ್ನು (ಹಣ್ಣಿನ ರಸ, ಜಾಮ್, ಉಪ್ಪಿನಕಾಯಿ ಇತ್ಯಾದಿ) ಮಾಡಲಾಗುತ್ತದೆ.

ಒಂದು ಕೆ.ಜಿ ಮಾವಿನ ಹಣ್ಣಿನಿಂದ ಸುಮಾರು ಅರ್ಧ ಕೆ.ಜಿ ಯಷ್ಟು ಪಲ್ಪ್ ಸಿಗುತ್ತದೆ. ಆದರೆ, ಕರ್ನಾಟದಲ್ಲಿ ಕೇವಲ ಮೂರು ಪಲ್ಪ್ ಕೈಗಾರಿಕೆಗಳು ಇರುವುದರಿಂದ ರೈತರು ಬೆಳೆದಿರುವ ಮಾವನ್ನು ಗರಿಷ್ಟ ಬಳಕೆ (Optimum Utilization) ಆಗುತ್ತಿಲ್ಲ. ನಮ್ಮ ರಾಜ್ಯದಲ್ಲಿ ಬೆಳೆದಿರುವ ಮಾವನ್ನು ಆಂಧ್ರ ಸರ್ಕಾರ ನಿಷೇದ ಮಾಡಿರುವುದರಿಂದ ಬೇಡಿಕೆ ಕುಸಿದು ರೈತರು ಕಂಗಾಲಾಗಿದ್ದಾರೆ.

ಸರ್ಕಾರ, ಕೂಡಲೇ ಪಲ್ಪ್ ಕೈಗಾರಿಕೆಗಳನ್ನು ಪ್ರಾರಂಭಿಸಲಿ, ಇಲ್ಲದಿದ್ದರೆ ಆಸಕ್ತ ನವೋದ್ಯಮಗಳಿಗೆ (start up) ಕೈಗಾರಿಕೆಗಳಿಗ ಅವಕಾಶ ನೀಡಲಿ, ಇದರಿಂದ ಉದ್ಯೋಗ ಸೃಜನೆ ಆಗುವುದಲ್ಲದೆ ರೈತರ ಮಾವನ್ನು ಬಳಕೆ ಮಾಡಿಕೊಂಡು ಅವರಿಗೆ ಉತ್ತಮ ಬೆಲೆಯನ್ನು ನೀಡಬಹುದು.

ನಮ್ಮ ರಾಜ್ಯದಲ್ಲಿ ಬೆಳೆಯುವ ಮಾವಿನ ಉಪ ಉತ್ಪನ್ನವನ್ನು ಉತ್ತಮ ಬ್ರಾಂಡಿಂಗ್ ಹಾಗೂ ಮಾರ್ಕೆಟಿಂಗ್ ಮಾಡುವ ಮೂಲಕ ದೇಶವ್ಯಾಪಿ ಬೇಡಿಕೆ ಸೃಷ್ಟಿಸುವ ಸುವರ್ಣವಾಕಾಶವನ್ನು ಸರ್ಕಾರ ಕೈಬಿಡಬಾರದು.

ಸರ್ಕಾರ ಗಂಭೀರವಾಗಿ ಯೋಚಿಸಿ, ಪಲ್ಪ್ ಕೈಗಾರಿಕೆಗಳಿಗೆ ಉತ್ತೇಜನ ನೀಡಲಿ ಹಾಗೂ ಕೂಡಲೇ ಆಂಧ್ರ ಸರ್ಕಾರ ಕೈಗೊಂಡಿರುವ ನಿಷೇಧವನ್ನು ತೆರವುಗೊಳಿಸಲು ಖುದ್ದು ಮುಖ್ಯ ಮಂತ್ರಿಗಳೇ ಆಂಧ್ರ ಮುಖ್ಯ ಮಂತ್ರಿಗಳೊಂದಿಗೆ ಮಾತನಾಡಿ ಬಗೆಹರಿಸಲಿ ಎಂದಿದ್ದಾರೆ.