ನನ್ನ-ನನ್ನ ಕಂದಮ್ಮಗಳಿಗೆ ಯಾಕೋ ಬಲವಿಲ್ಲದಂತೆ ಆಗಿದೆ. ಸರ್ಕಾರದವರು ಏನೇನೋ ಮಾಡುತ್ತಿದ್ದಾರೆ. ಯಾರು ಎಂದು ಗೊತ್ತಾಗುತ್ತಿಲ್ಲ ಎಂದು ಪಂ. ಲೇವೇಗೌಡರು ತಲೆಮೇಲೆ ಕೈ ಹೊತ್ತುಕುಳಿತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿದೆ. ಈ ಸುದ್ದಿಕೇಳಿ ಮಮ್ಮಲ ಮರುಗಿದ ಕೆಲವರು ಕೈಯಲ್ಲಿ ಸಜ್ಜೆ ತೆನೆ ಹಿಡಿದುಕೊಂಡು ಹೋಗಿ ನೀವೇನೂ ಚಿಂತೆ ಮಾಡಬೇಡಿ ಸಾಹೇಬ್ ನಾವೆಲ್ಲ ಇದೀವಿ ಪರಿಹಾರ ಹುಡುಕೋಣ ಎಂದು ಹೇಳಿದರು. ಅಲ್ಲಿಯೇ ಊಟ ಮಾಡಿ ಯೋಚನೆ ಮಾಡುತ್ತ ಸೋಫಾದ ಮೇಲೆ ಕುಳಿತರು. ಒಬ್ಬೊಬ್ಬರು ಒಂದೊಂದು ಐಡಿಯಾ ಕೊಟ್ಟರೂ ಲೇವೇಗೌಡರು ಅದನ್ನು ಒಪ್ಪುತ್ತಿರಲಿಲ್ಲ. ಕೊನೆಗೆ ಆ ಕಡೆಯಿಂದ ಬಂದವರು ಕೈ ಚೀಲ ತೆಗೆದು ಅಯ್ಯೋ ಇವನ… ಎಲಿ ಅಟ್ಟ ಅದಾವ ಸುಪಾರಿ ಮರ್ತೀನಿ ನೋಡು ಅಂದರು. ತಲೆಯಲ್ಲಿ ನೂರಾ ಒಂದು ಮಿಂಚು ಹೊಡೆದಂತಾಗಿ ಲೇವೇಗೌಡರು ಧಡಗ್ಗನೇ ಎದ್ದು ಕುಳಿತು ಸರ್ಕಾರದ ವಿರುದ್ಧ ಸುಪಾರಿ ಕೊಡುವುದೊಂದೇ ನಮಗೆ ಮಾರ್ಗ ಎಂದು ಅಂದುಕೊಂಡರು. ಹೌದು ಯಾರಿಗೆ ಸುಪಾರಿ ಕೊಡುವುದು? ಎಂದು ಚಿಂತೆ ಮಾಡಿ ಈ ಜವಾಬ್ದಾರಿಯನ್ನು ಲೇವಣ್ಣನಿಗೆ ಬಿಟ್ಟುಬಿಡೋಣ. ಅವನೇ ಈ ಕೆಲಸಕ್ಕೆ ಸರಿ.. ಎಲ್ಲವನ್ನೂ ಸರಿಯಾಗಿ ನಿಭಾಯಿಸುತ್ತಾನೆ. ಯಾರಿಗೆ ಸುಪಾರಿ ಕೊಡಬೇಕು? ಯಾರಿಂದ ಕೊಡಿಸಬೇಕು ಎಂಬುದು ಅವನಷ್ಟು ಯಾರೂ ತಿಳಿದುಕೊಂಡಿಲ್ಲ ಎಂದು ತಲೆ ತುರಿಸಿಕೊಂಡರು. ಅಲ್ಲಿದ್ದವರಿಗೆ ಮನಸ್ಸಿಲ್ಲದಿದ್ದರೂ ಯಜಮಾನರ ಮುಂದೆ ಹೂಂ… ಹೂಂ ಅಂದರು. ಏಯ್ ಅಲ್ಯಾರು ನಮ್ ಲೇವಣ್ಣನ ಕರಿ ಅಂದರು. ಐದು ನಿಮಿಷ ಬಿಟ್ಟು ಹಾಜರಾದ ಲೇವಣ್ಣ ಏನಪ್ಪಾಜಿ ಎಂದು ಕೇಳಿದರು. ಏನಿಲ್ಲ ಈ ಸರ್ಕಾರದವರು ಏನೋ ಮಾಡ್ತಾ ಇದಾರೆ.. ಸುಪಾರಿ ಕೊಟ್ಟುಬಿಡು ಎಂದು ಹೇಳಿ ಒಂದು ದೊಡ್ಡ ಕರಿಬಣ್ಣದ ಬೆಟ್ಟಡಿಕೆ ಕೊಟ್ಟು ಗಟ್ಟಿಯಾಗಿ ಹಿಡಿದುಕೊಂಡು ಹೋಗು ಎಂದು ಹೇಳಿದರು. ಅದರ ಪ್ರಕಾರ ಲೇವಣ್ಣ ಅಡಿಕೆಗೆ ಎರಡೆರಡು ಹಾಳೆ ಸುತ್ತಿ ಅದನ್ನು ಗಟ್ಟಿಯಾಗಿ ಹಿಡಿದುಕೊಂಡು ಹೊರಟ. ಸೀದಾ ಮದ್ರಾಮಣ್ಣನವರ ಹತ್ತಿರ ಬಂದು ಅಣ್ಣಾ ಅಪ್ಪಾಜಿ ಸರ್ಕಾರಕ್ಕೆ ಸುಪಾರಿ ಕೊಡು ಅಂದೈತಿ ಎಂದು ಸುತ್ತಿದ ಹಾಳೆ ಕೊಟ್ಟರು. ಅದನ್ನು ಬಿಡಿಸಿ ನೋಡಿದ ಮದ್ರಾಮಣ್ಣ… ಅಯ್ಯೋ ನಾನು ಅಡಿಕೆ ತಿನ್ನಲ್ಲ ಮಾರಾಯಾ ಎಂದು ವಾಪಸ್ ಕೊಟ್ಟರು.