ಸರಕಾರದ ಆದ್ಯತೆಗಳೇನಾಗಬೇಕು?

ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿ, ಬಹುಜನರ ಕಲ್ಯಾಣದ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಜನರಿಂದ ಆಯ್ಕೆ ಆದ ಸರಕಾರದ ಆದ್ಯ ಕರ್ತವ್ಯ. ಅದುವೇ ಪ್ರಜಾಪ್ರಭುತ್ವದ ಮೂಲ ಆಶಯ ಕೂಡ. ಜಾತಿ-ಮತ-ಪಂಥ, ಧರ್ಮ, ಭಾಷೆ, ಪ್ರದೇಶ ಮತ್ತು ಅಂತಸ್ತುಗಳ ಭೇದ, ಭಾವ ಮಾಡದೇ, ಸಕಲರ ಹಿತಕ್ಕಾಗಿ ಶ್ರಮಿಸುವುದು ಜನಪ್ರತಿನಿಧಿಗಳ ಹೊಣೆ. ಇದು ಆದರ್ಶವಾದ ಮತ್ತು ಅಪೇಕ್ಷಿತ ನಡೆ. ಆದರೂ ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ಪಾರಂಪರಿಕ ಕಾರಣಗಳಿಗಾಗಿ ಕೆಲವೊಂದು ಅಪವಾದಗಳೂ ಇರಬಹುದು. ಆದರೆ ಯಾರದನ್ನೋ ಕಿತ್ತುಕೊಂಡು ಮತ್ತಾರಿಗೋ ಕೊಡುವುದು, ಒಬ್ಬರನ್ನು ಖುಷಿಪಡಿಸಲು ಇನ್ನೊಬ್ಬರನ್ನು ಹಳಿಯುವುದು, ತಮಗೆ ಬೇಕಾದವರನ್ನು ತುಷ್ಠೀಕರಿಸಲು ಬೇಡವಾದವರನ್ನು ತುಚ್ಛೀಕರಿಸುವುದು ಮತ್ತು ವಿಧರ್ಮೀಯರನ್ನು ಸಂತುಷ್ಟಪಡಿಸಲು ತಮ್ಮ ಧರ್ಮದ ಬಗೆಗೇ ಬೇಕಾಬಿಟ್ಟಿಯಾಗಿ ಮಾತನಾಡುವುದು ಇಂದಿನ ಮೌಲ್ಯರಹಿತ ರಾಜಕಾರಣವಾಗಿದೆ.
ಹಾಗೆ ನೋಡಿದರೆ ರಾಜಕಾರಣವೇನೇ ಇರಲಿ ಅಭಿವೃದ್ಧಿ ವಿಷಯದಲ್ಲಿ ಅದು ನುಸುಳಬಾರದು. ಸುಸ್ಥಿರವಾದ ಅಭಿವೃದ್ಧಿ ಯಾವುದೇ ಸರಕಾರದ ಆದ್ಯತೆ ಆಗಬೇಕು. ಅಗ್ಗದ ಜನಪ್ರಿಯತೆಯ ಯೋಜನೆಗಳಿಂದ ಅಭಿವೃದ್ಧಿಗೆ ಅಡ್ಡಿಯಾಗಬಾರದು. ಸುಸ್ಥಿರಾಭಿವೃದ್ಧಿಯ ದೂರದ ಆಲೋಚನೆಯೇ ಮೂಲಮಂತ್ರವಾಗಬೇಕು. ಕುಳಿತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು'' ಎನ್ನುವಂತೆ ಇರುವ ಸಂಪತ್ತನ್ನು ಮರು ಉತ್ಪಾದಕ ಯೋಜನೆಗಳಿಗೆ ಉಪಯೋಗಿಸದೇ ಮತ ತುಷ್ಠೀಕರಣಕ್ಕೆ ಅವೈಜ್ಞಾನಿಕವಾಗಿ ವಿನಿಯೋಗಿಸಿದರೆ ದಿವಾಳಿ ಗ್ಯಾರಂಟಿ! ಜಗತ್ತಿನ ಅನೇಕ ರಾಷ್ಟ್ರಗಳ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ದುಡಿಯದೇ ದೊರೆಯುವ ಉಚಿತ ಕೊಡುಗೆಗಳು ಶ್ರಮ ಸಂಸ್ಕೃತಿಗೆ ವಿರುದ್ಧವೂ ಹೌದು. ಇತ್ತೀಚೆಗೆ ರಾಜ್ಯ ಸರಕಾರ ಸಾವಿರಾರು ಹೆಂಡದಂಗಡಿಗಳಿಗೆ ಪರವಾನಿಗೆ ಕೊಟ್ಟಿದೆ. ಅಬಕಾರಿ ಸಚಿವರು ಹೇಳುವ ಪ್ರಕಾರ ಇದು ಕಡಿಮೆಯೇ! ಕರ್ನಾಟಕದ ಜನಸಂಖ್ಯೆಗೆ ಹೋಲಿಸಿದರೆ ಇದು ಇನ್ನೂ ಹೆಚ್ಚಾಗಬೇಕು ಎನ್ನುವ ಅಂಬೋಣ ಅವರದು. ಜನರ ಆರೋಗ್ಯ, ಕುಟುಂಬ, ಸೌಖ್ಯ ಮತ್ತು ಮಹಿಳೆಯರ ಸಾಮಾಜಿಕ/ಆರ್ಥಿಕ ಸಂರಕ್ಷಣೆಗೆ ಬದ್ಧವಾಗಿರಬೇಕಾಗಿರುವುದು ಸರಕಾರದ ಜವಾಬ್ದಾರಿ. ಆದರೆ ಮದ್ಯದಿಂದ ಬರುವ ಆದಾಯದ ಮೇಲೆ ಕಣ್ಣಿಟ್ಟು ಕುಡುಕರನ್ನು ಅವಲಂಬಿಸಿದ ಲಕ್ಷಾಂತರ ಕುಟುಂಬಗಳನ್ನು ದುಃಸ್ಥಿತಿಗೆ ತಳ್ಳುವುದು ಯಾವ ಪುರುಷಾರ್ಥಕ್ಕೆ? ಜನರ ಆರೋಗ್ಯಕ್ಕಿಂತ ಬರುವ ಆದಾಯವೇ ಹೆಚ್ಚಾಯಿತಾ? ಮದ್ಯದಂಗಡಿಗಳನ್ನು ತೆರೆಯುವುದೇ ಆದ್ಯತೆ ಆದರೆ ಸಹಜವಾಗಿಯೇ ಶಾಲಾ-ಕಾಲೇಜುಗಳನ್ನು ಮುಚ್ಚಬೇಕಾಗುತ್ತದೆ. ಏಕೆಂದರೆ ಮಕ್ಕಳ ಶಿಕ್ಷಣಕ್ಕಾಗಿ ವೆಚ್ಚ ಮಾಡಬೇಕಾದ ಹಣವನ್ನು ಪಾಲಕರು ಕುಡಿತಕ್ಕೆ ಇಡಬೇಕಾಗುತ್ತದೆ! ಆದ್ದರಿಂದ ಸಾರಾಯಿ ಅಂಗಡಿಗಳನ್ನು ತೆರೆಯುವುದಕ್ಕಿಂತ ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೂ ಮೂಲಾಧಾರವಾಗಿರುವುದು ಶಿಕ್ಷಣ. ಉನ್ನತ ಶಿಕ್ಷಣವನ್ನು ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಪಡೆದುಕೊಳ್ಳುವುದರಿಂದ ನಾಡಿನ ಅಭಿವೃದ್ಧಿಯ ವೇಗ ನಾಗಾಲೋಟ ಪಡೆಯುತ್ತದೆ. ಅದರೆ ಹೆಚ್ಚು ಹೆಚ್ಚು ಕಾಲೇಜು, ವಿಶ್ವವಿದ್ಯಾಲಯಗಳು ಸನಿಹದಲ್ಲಿದ್ದು, ಸುಲಭದರಲ್ಲಿ ಸೀಟು ಸಿಕ್ಕು ಕೈಗೆಟಕುವ ಶುಲ್ಕ ಭರಿಸುವಂತಿರಬೇಕು. ಇದರಿಂದ ಉನ್ನತ ಶಿಕ್ಷಣದ ದಾಖಲಾತಿ, ಪ್ರಸಾರ ಹೆಚ್ಚುತ್ತವೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಹೊಸ ಕಾಲೇಜುಗಳನ್ನು, ವಿಶ್ವವಿದ್ಯಾಲಯಗಳನ್ನು ತೆರೆಯುವುದಿರಲಿ ಇರುವುದನ್ನೇ ಮುಚ್ಚಿ ಬಿಡುವ ಯೋಚನೆಯಲ್ಲಿ ಸರಕಾರವಿದೆ. ವಿದ್ಯಾರ್ಥಿಗಳ ದಾಖಲಾತಿ ಅಧ್ಯಾಪಕರ ಕೊರತೆ, ಮೂಲಭೂತ ಅವಶ್ಯಕತೆಗಳ ಕೊರತೆ ಹಾಗೂ ಹಣಕಾಸಿನ ಹೊರೆಯನ್ನೇ ನೆಪ ಮಾಡಿಕೊಂಡು ರದ್ದುಪಡಿಸುವ ವಿಚಾರವನ್ನು ಹೊರಹಾಕಿ ಅಲ್ಲಿರುವ ವಿದ್ಯಾರ್ಥಿ, ಅಧ್ಯಾಪಕ ಮತ್ತು ಪಾಲಕರನ್ನು ಅತಂತ್ರ ಸ್ಥಿತಿಗೆ ಸರಕಾರ ದೂಡಿದೆ. ವಿಶ್ವವಿದ್ಯಾಲಯಗಳನ್ನು ಸಧೃಡಗೊಳಿಸುವುದು ಸರಕಾರದ ಆದ್ಯತೆ ಆಗಬೇಕೆ ಹೊರತು, ಅತಂತ್ರಗೊಳಿಸುವುದಲ್ಲ. ಇರುವ ವ್ಯವಸ್ಥೆಯಲ್ಲಿ ವಿಶ್ವಾಸ ತುಂಬುವ ಯತ್ನವಾಗಬೇಕೆ ಹೊರತು ಧೃತಿಗೆಡಿಸುವ ಕುಚೋದ್ಯವಾಗಬಾರದು. ಆರ್ಥಿಕವಾಗಿ ವಿಶ್ವವಿದ್ಯಾಲಯಗಳನ್ನು ಬಲಪಡಿಸುವ ಕೆಲಸವನ್ನು ಹಿಂದಿನ ಸರಕಾರ ಮಾಡದಿದ್ದರೆ ಈಗ ತಾನು ಮಾಡಿ ತೋರಿಸಬೇಕಲ್ಲವೇ? ತೆರದ ಹೊಸ ವಿಶ್ವವಿದ್ಯಾಲಯಗಳನ್ನು ಇದ್ದಕ್ಕಿದ್ದಂತೆ ಮುಚ್ಚುವುದೂ ಅಷ್ಟೇ ಅವೈಜ್ಞಾನಿಕವಾಗುತ್ತದೆ. ಗ್ಯಾರಂಟಿಗಳ ಹೊರೆಯಿಂದ ತತ್ತರಿಸಿದ ಸರಕಾರಗಳು ಸಹಜವಾಗಿಯೇ ಅಭಿವೃದ್ಧಿಗೆ ಹಣ ಹೊಂದಿಸಲಾಗದೇ ಪರಿತಪಿಸುತ್ತಿವೆ. ಅದಾಯದ ಇತರೆ ಮೂಲಗಳಿಗಾಗಿ ತಡಕಾಡುತ್ತಿವೆ. ಜನಸಾಮಾನ್ಯರ ಮೇಲಿನ ವಿವಿಧ ತೆರಿಗೆಗಳನ್ನು ಏರಿಸುವುದರತ್ತ ಲಕ್ಷ್ಯ ಹರಿಸುತ್ತವೆ. ಇದರಿಂದಾಗಿ ರಾಜ್ಯ ಸರಕಾರಗಳು ಈಗಾಗಲೇ ಇರುವ ಸಾಲದ ಶೂಲಕ್ಕೆ ಮತ್ತಷ್ಟು ಸಿಲುಕಿಕೊಳ್ಳುತ್ತದೆ. ಆದಾಯದ ಮೂಲಗಳನ್ನು ಸೃಷ್ಟಿಸುವತ್ತ ಆದ್ಯತೆ ಇರಬೇಕೇ ಹೊರತು ಸಾಲದ ಕೂಪಕ್ಕೆ ತಳ್ಳುವ ಧಾವಂತವಿರಬಾರದು. ಒಂದು ಸಲ ಕೊಟ್ಟ ಉಚಿತ ಕೊಡುಗೆಗಳನ್ನು ಹಿಂತೆಗೆದುಕೊಳ್ಳುವುದು ಕಷ್ಟ. ಇದರ ಜೊತೆಗೆ ಇತರ ಬೇಡಿಕೆಗಳ ಪಟ್ಟಿಯೂ ಬೆಳೆಯುತ್ತದೆ. ಜನರಿಗೆ ದುಡಿಯುವ ಪ್ರವೃತ್ತಿಗಿಂತ ಬೇಡುವ ಪ್ರವೃತ್ತಿಯೇ ಬೆಳೆಯುತ್ತದೆ. ಅವರ ಸ್ವಾಭಿಮಾನಕ್ಕೂ ಇದರಿಂದ ಧಕ್ಕೆಯಾಗುತ್ತದೆ. ಜನರಿಗೆ ದುಡ್ಡು ಕೊಟ್ಟು ಅವಲಂಬಿತರನ್ನಾಗಿಸುವದಕ್ಕಿಂತ ದುಡಿಮೆ ಕೊಟ್ಟು ಸ್ವಾವಲಂಬಿಗಳನ್ನಾಗಿಸುವುದು ಸರಕಾರದ ಆದ್ಯತೆ ಆಗಬೇಕು. ಉಚಿತ ಕೊಡುಗೆಗಳ ವೆಚ್ಚವನ್ನು ಸರಿದೂಗಿಸಲು ಈ ಮೊದಲಿದ್ದ ವಿದ್ಯಾನಿಧಿ, ರೈತ ಸಮ್ಮಾನ್, ಮುಂತಾದ ಯೋಜನೆಗಳನ್ನು ನಿಲ್ಲಿಸಲಾಗಿದೆ. ಅನ್ನಭಾಗ್ಯ ಅತಂತ್ರವಾಗಿದೆ. ಹಲವು ತಿಂಗಳುಗಳ ಬಾಕಿ ಕೊಡಲು ಪರದಾಡುತ್ತಿದೆ. ಗೃಹಲಕ್ಷ್ಮೀಗಾಗಿ ಚಾತಕಪಕ್ಷಿಯಂತೆ ಕಾಯುವಂತಾಗಿದೆ. ಕೆಲವರಿಗೆ ವಿದ್ಯುತ್‌ನ್ನು ಉಚಿತವಾಗಿ ವಿತರಿಸಿ ಇನ್ನುಳಿದವರಿಗೆ ಹೆಚ್ಚಿಗೆ ಶುಲ್ಕ ವಿಧಿಸಲಾಗುತ್ತಿದೆ. ಗ್ಯಾರಂಟಿಯ ಕಾರಣದಿಂದ ಕೆಲವರು ಕೊಳವೆ ಬಾವಿ ಕೊರೆಸಿದ್ದು, ದೇವರಿಗೆ ಬೆಳ್ಳಿ ಕಿರೀಟ ಕೊಡಿಸಿದ್ದು ಇತ್ಯಾದಿ ಬೆರಳೆಣಿಕೆಯ ಯಶೋಗಾಥೆಗಳೂ ಇವೆ ನಿಜ. ಆದರೆ ಇವೆಲ್ಲ ಅಪವಾದಗಳು ಮಾತ್ರ. ಆದರೆ ಒಟ್ಟಾರೆ ಪರಿಣಾಮವು ನಾಡಿನ ಆರ್ಥಿಕ ಪರಿಸ್ಥಿತಿಯ ಮೇಲೆ ವ್ಯತಿರಿಕ್ತವಾಗಿರುವುದಂತೂ ನಿಜ. ಮುಂಬರುವ ಸರಕಾರಕ್ಕೆ ಸಾಲದ ಹೊರೆ ಹೆಚ್ಚುವುದೂ ದಿಟ. SC/ST, OBC ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವವರಿಗೆ ಸಹಾಯ, ವಸತಿ, ಶಾಲೆ ಹಾಗೂ ಹಾಸ್ಟೆಲ್ ಕಟ್ಟಡ ನಿರ್ಮಾಣದಂತಹ ಕೆಲಸಗಳಿಗೆ ಮೀಸಲಾಗಿಟ್ಟ ಅನುದಾನವನ್ನು ಇತರ ಉದ್ದೇಶಗಳಿಗೆ ಸರಕಾರ ಉಪಯೋಗಿಸಿದೆ. ತಾನೇ ಹಾಕಿಕೊಂಡ ಆದ್ಯತೆಗಳನ್ನು ನಿರ್ಲಕ್ಷಿಸಿದೆ. ದಲಿತ, ಆದಿವಾಸಿಗಳ ಸಬಲೀಕರಣ, ದಲಿತಕೇರಿ, ಕಾಲನಿ, ಹಾಡಿಗಳಿಗೆ ಮೂಲ ಸೌಲಭ್ಯ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ವಸತಿ ಸ್ವಾವಲಂಬನೆಗೆ ಒತ್ತುಕೊಡಲು ಟ್ರೈಬಲ್ ಸಬ್ ಪ್ಲಾನ್ (ಟಿಎಸ್‌ಪಿ) ನಂತಹ ಅಧಿನಿಯಮಗಳ ಜಾರಿಗೆಗೆ ಆದ್ಯತೆ ಇರಬೇಕು. ಅದು ಬಿಟ್ಟು ಕಾನೂನಿನಲ್ಲಿ ಅಪವಾದದಂತಿರುವಅನ್ಯ ಉದ್ದೇಶಕ್ಕೆ ಬಳಸುವುದು” ಎನ್ನುವ ಅವಕಾಶವನ್ನೇ ಯಥೇಚ್ಛವಾಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸುವುದು ಸಮರ್ಥನೀಯವಲ್ಲ.
ಎಲ್ಲ ಧರ್ಮಗಳಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರನ್ನು ಎತ್ತಿ ಹಿಡಿಯುವುದು ಸರಕಾರದ ಆದ್ಯತೆ ಆಗಿರಬೇಕು. ಅಲ್ಪಸಂಖ್ಯಾತರು, ಬಹುಸಂಖ್ಯಾತರೆಂದು ವಿಭಜಿಸಿ ತಮಗೆ ಬೇಕಾದವರಿಗೆ ಮಾತ್ರ ಸೌಲಭ್ಯ ಸಹಾಯಗಳನ್ನು ಒದಗಿಸುವುದು ಸಲ್ಲ. ಜಗತ್ತಿನಲ್ಲೇ ಶ್ರೇಷ್ಠವಾದ ಭಾರತದ ಸಂವಿಧಾನ ನಿರ್ಮಾಪಕರ ಆಶಯಕ್ಕೆ ವಿರುದ್ಧವಾಗಿ ಧರ್ಮಾಧಾರಿತವಾಗಿ ಮೀಸಲು ಕಾನೂನನ್ನು ಜಾರಿಗೆ ತರುವುದು ಒಳ್ಳೆಯದಲ್ಲ. ಸಹಬಾಳ್ವೆ, ಸಮನ್ವಯ ಮತ್ತು ಸಮಾನತೆಯ ಆಧಾರದಲ್ಲಿ ಯಾವುದೊಂದು ಯೋಜನೆಯೂ ರೂಪಿತವಾಗಬೇಕು.