ಸಪ್ತಪದಿಯ ತತ್ವ ಮದುವೆಯ ಮಹತ್ವ

ಸಂಪಾದಕೀಯ
Advertisement

ಕೌಟುಂಬಿಕ ಪದ್ಧತಿ ಆಧಾರಿತ ಸಾಮಾಜಿಕ ವ್ಯವಸ್ಥೆ ಭಾರತೀಯ ಸಮಾಜದ ಕಣ್ಣು. ಇಂತಹ ಕಣ್ಣಿಗೆ ಹೃದಯದ ರೂಪದಲ್ಲಿ ಆಸರೆಯಾಗಿರುವುದು ವಿವಾಹ ಎಂಬ ಸಾಂಸ್ಥಿಕ ರೂಪದ ವ್ಯವಸ್ಥೆ. ಶಾಂತಿ, ಸಮಾಧಾನ ಹಾಗೂ ನೆಮ್ಮದಿಯ ನಡುವೆ ಪ್ರಗತಿಯ ದಾರಿಯನ್ನು ಅರಸಿಕೊಂಡು ಮುಂದಾಗುವ ಮನೋಧರ್ಮ ಭಾರತೀಯ ಸಮಾಜದಲ್ಲಿ ಹಾಸುಹೊಕ್ಕಾಗಲು ಇಂತಹ ಮಧುರ ಸಂಬಂಧದ ವ್ಯವಸ್ಥೆಯೇ ಆಧಾರ. ಪಾಶ್ಚಿಮಾತ್ಯ ರಾಷ್ಟ್ರಗಳ ಜೀವನಶೈಲಿಯ ಅಗ್ಗದ ಅನುಕರಣೆಯ ರೀತಿಯಿಂದಲೋ ಏನೋ ಕೌಟುಂಬಿಕ ವ್ಯವಸ್ಥೆಗೆ ಪೆಟ್ಟು ಬೀಳುವ ರೀತಿಯಲ್ಲಿ ವೈವಾಹಿಕ ಸಂಬಂಧಗಳು ಮುರಿದುಬೀಳುತ್ತಿರುವುದು ಭಾರತದ ಪರಂಪರೆ ಹಾಗೂ ವರ್ತಮಾನಕ್ಕೆ ದೊಡ್ಡ ಕಪ್ಪುಚುಕ್ಕೆ. ಇಂತಹ ಪರಿಸ್ಥಿತಿಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಭಾರತದ ವಿವಾಹಗಳಿಗೆ ಸಂಬಂಧಿಸಿದಂತೆ ಕೊಟ್ಟಿರುವ ತೀರ್ಪು ನಿಜಕ್ಕೂ ನ್ಯಾಯೋಚಿತ ಹಾಗೂ ಧರ್ಮೋಚಿತವಾಗಿರುವ ಜೊತೆಗೆ ಸಮಯೋಚಿತವೂ ಆಗಿದೆ. ವಿಮಾನದ ಪೈಲೆಟ್‌ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಗಂಡ ಹೆಂಡತಿಯರ ಮದುವೆಗೆ ಸಂಬಂಧಿಸಿದಂತೆ ಪ್ರಕರಣವೊಂದನ್ನು ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಹಾಗೂ ಅಗುಸ್ಟೈನ್ ಜಾರ್ಜ್ ಮಾಸಿಹ ಸದಸ್ಯತ್ವದ ದ್ವಿಸದಸ್ಯ ನ್ಯಾಯಪೀಠ ಹಿಂದೂ ಧರ್ಮದ ಮದುವೆಗಳ ತತ್ವ ಹಾಗೂ ಮಹತ್ವವನ್ನು ಮೌಲಿಕವಾಗಿ ವಿಶ್ಲೇಷಿಸಿರುವುದು ವರ್ತಮಾನದಲ್ಲಿ ಹಲವು ಕಾರಣಗಳಿಗಾಗಿ ದಿಕ್ಕೆಟ್ಟಂತಾಗಿರುವ ಹಾಗೂ ಕೈಗೊಂಡ ನಿರ್ಧಾರದ ಸರಿ ತಪ್ಪುಗಳ ವಿಮರ್ಶೆ ಮಾಡುತ್ತಿರುವ ಅಸಂಖ್ಯ ಜನರಿಗೆ ಮಾರ್ಗಸೂಚಿಯಾಗಿದೆ.
ಈ ದ್ವಿಸದಸ್ಯ ನ್ಯಾಯಪೀಠ ಹಿಂದೂ ಮದುವೆಯ ಮಹತ್ವವನ್ನು ವಿವರಿಸುವ ವಿಧಾನದಲ್ಲಿ ಪರಂಪರೆ ಜೊತೆಗೆ ವರ್ತಮಾನದಲ್ಲಿ ಅದು ಪಡೆದುಕೊಳ್ಳುತ್ತಿರುವ ಬೇರೆ ಬೇರೆ ಸ್ವರೂಪಗಳ ಪ್ರಸ್ತಾಪವಿದೆ. ಕೇವಲ ಕಚೇರಿಯಲ್ಲಿ ನೋಂದಣಿ ಮಾಡಿದಾಕ್ಷಣ ಹಿಂದೂ ಪದ್ಧತಿಯ ಮದುವೆ ಆಗುವುದಿಲ್ಲ. ಹಿಂದೂ ಪದ್ಧತಿಯ ಮದುವೆಯಲ್ಲಿ ಸ್ಥಾಪಿತ ಸಂಪ್ರದಾಯಗಳು ಹಾಗೂ ಒಪ್ಪಿತ ವಿಧಿ ವಿಧಾನಗಳು ಪರಿಪಾಲನೆಯಾಗಲೇಬೇಕು. ನವದಂಪತಿಗಳ ಸಪ್ತಪದಿ ಮದುವೆಯ ನಿರ್ಣಾಯಕ ಅಂಶ. ಸಪ್ತಪದಿ ಇಲ್ಲದ ಮದುವೆ ಹಿಂದೂ ಪದ್ಧತಿಗೆ ಅನುಗುಣವಾದ ಮದುವೆ ಆಗುವುದೇ ಇಲ್ಲ' ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿರುವುದು ನಿಜಕ್ಕೂ ದೇಶಕ್ಕೆ ಕಣ್ತೆರೆಸುವ ಒಂದು ಕ್ರಮ. ಸುಪ್ರೀಂಕೋರ್ಟಿನ ವಿಶ್ಲೇಷಣೆ ಇಷ್ಟಕ್ಕೇ ಮುಗಿಯುವುದಿಲ್ಲ. ಕಿವಿ ತೂತು ಬೀಳುವ ರೀತಿಯಲ್ಲಿ ಧ್ವನಿವರ್ಧಕಗಳನ್ನು ಬಳಸಿ ಹಾಡು ಕುಣಿತ, ಮೋಜು ಮೇಜವಾನಿ ಇದ್ದಾಕ್ಷಣ ಹಿಂದೂ ಮದುವೆ ಎನ್ನಿಸಿಕೊಳ್ಳುವುದಿಲ್ಲ. ಇದೊಂದು ಸಾಂಪ್ರದಾಯಿಕ ಪದ್ಧತಿಯ ವಿಧಿ ವಿಧಾನದಿಂದ ರೂಪುಗೊಂಡಿರುವ ಪ್ರಶ್ನಾತೀತ ವ್ಯವಸ್ಥೆ. ಯಾವುದೇ ಕಾರಣಕ್ಕೆ ಇದೊಂದು ಅನುಕೂಲಸಿಂಧು ಪ್ರಕ್ರಿಯೆಯಾಗಲಾರದು. ವರದಕ್ಷಿಣೆ ದುರಾಸೆಯ ಸಲುವಾಗಿ ನಡೆದ ಮದುವೆ ಯಾವುದೇ ಕಾರಣಕ್ಕೆ ಮದುವೆ ಎನಿಸಿಕೊಳ್ಳುವುದಿಲ್ಲ. ಹಾಗೆಯೇ ಉಡುಗೆ ತೊಡುಗೆಗಳ ವಿನಿಮಯ ಮಾಡಿಕೊಳ್ಳುವುದು ಕೂಡಾ ಒಂದು ಸಾಮಾಜಿಕ ಪ್ರಕ್ರಿಯೆಯೇ ಹೊರತು ಅದು ವಿಧಿ ವಿಧಾನವಲ್ಲ ಸಾಮಾಜಿಕ ಪ್ರಕ್ರಿಯೆಯ ಹಿಂದೆ ವಂಚನೆಯ ಸೋಗಿದ್ದರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲು ಹಿಂದೂ ವಿವಾಹ ಕಾಯ್ದೆಯ ಪ್ರಕಾರ ಅವಕಾಶವಿದೆ. ಹಿಂದೂ ಪದ್ಧತಿಯ ಮದುವೆ ಎಂದರೆ ಹೆಣ್ಣು ಮತ್ತು ಗಂಡು ಸಾಂಪ್ರದಾಯಿಕವಾಗಿ ಗಂಡ ಹೆಂಡತಿ ಎಂಬ ಸ್ಥಾನವನ್ನು ಪಡೆಯಲು ಏರ್ಪಾಡಾಗುವ ಒಂದು ಸಮಾರಂಭ. ಈ ದಾಂಪತ್ಯದ ಬೆಸುಗೆಗೆ ಭಾರತೀಯ ಸಮಾಜದ ಹೆಗ್ಗುರುತು’ ಎಂದು ವಿಸ್ತಾರವಾಗಿ ವ್ಯಾಖ್ಯಾನಿಸಿ ಎಲ್ಲಾ ರೀತಿಯ ಗೊಂದಲಗಳಿಗೆ ಪರಿಹಾರ ಒದಗಿಸಿರುವ ವಿಧಾನ ನಿಜಕ್ಕೂ ಸ್ವಾಗತಾರ್ಹ.
ಇಂತಹ ತೀರ್ಪಿಗೆ ಪ್ರೇರಣೆಯಾದದ್ದು ಮದುವೆಯಾಗಿರುವ ಇಬ್ಬರು ಪೈಲೆಟ್‌ಗಳು ಸಲ್ಲಿಸಿದ್ದ ರಿಟ್ ಅರ್ಜಿ. ಈ ಪೈಲೆಟ್‌ಗಳು ಮದುವೆಯಾಗಿದ್ದರೂ ಯಾವುದೇ ರೀತಿಯ ವಿಧಿ ವಿಧಾನಗಳನ್ನು ಮದುವೆಯ ಸಮಾರಂಭದಲ್ಲಿ ಪರಿಪಾಲಿಸಿರಲಿಲ್ಲ. ಬದಲಿಗೆ ಮದುವೆಯನ್ನು ನೋಂದಣಿ ಮಾಡಿಸಿಕೊಂಡಿದ್ದರು. ಈ ಮದುವೆಯನ್ನು ಸಕ್ರಮಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪೀಠ ಯಾಕೋ ಏನೋ ಇತ್ತೀಚಿನ ದಿನಮಾನಗಳಲ್ಲಿ ಮದುವೆಯ ನಂತರ ಮದುವೆಯನ್ನು ನೋಂದಣಿ ಮಾಡಿಸುವ ಪದ್ಧತಿ ಹೆಚ್ಚಾಗುತ್ತಿದೆ. ಬಹುಶಃ ಇದಕ್ಕೆ ಬೇರೆ ದೇಶಗಳಿಗೆ ಹೋಗಲು ವೀಸಾ ಪಡೆಯುವ ಕಾರಣವಿರಬೇಕು. ತರುಣರು ಮದುವೆಗೆ ಮುನ್ನ ಮದುವೆಯ ಸಂಬಂಧದ ಬಗ್ಗೆ ವ್ಯಾಪಕವಾಗಿ ಅರಿಯಬೇಕು. ಭಾರತೀಯ ಸಮಾಜಕ್ಕೆ ವಿಶಿಷ್ಟ ಸ್ವರೂಪವನ್ನು ತಂದುಕೊಟ್ಟಿರುವ ಇಂತಹ ವ್ಯವಸ್ಥೆಯ ಮಹತ್ವವನ್ನು ಅರಿತರಷ್ಟೆ ಮದುವೆಯಾದ ನಂತರ ಅದನ್ನು ಪರಿಪಾಲಿಸಲು ಸಾಧ್ಯ ಎಂಬುದನ್ನು ಮರೆಯಬಾರದು' ಎಂಬ ಕಿವಿಮಾತಿನ ಮೂಲಕ ನ್ಯಾಯಾಲಯ ದೇಶದ ಜನತೆಗೆ ಎಚ್ಚರಿಸಿದೆ. ಮದುವೆಯ ಸಂಬಂಧವನ್ನು ಇತ್ತೀಚಿನ ದಿನಮಾನಗಳಲ್ಲಿ ಲಘುವಾಗಿ ಕಾಣುತ್ತಿರುವಾಗ ಸುಪ್ರೀಂಕೋರ್ಟಿನ ಈ ತೀರ್ಪು ಮಹತ್ವ ಪಡೆದುಕೊಂಡಿದೆ.ಧರ್ಮೇಚ ಅರ್ಥೇಚ ಕಾಮೇಚ ಶಬ್ದಗಳಿಗೆ ಸಂವಾದಿಯಾಗಿ ನಾಚಿತರಾಮಿ ಎಂಬ ಸಮ್ಮತಿಯ ಶಬ್ದ ಪ್ರಯೋಗದ ಹಿಂದಿರುವುದು ಪರಸ್ಪರ ಹೊಂದಾಣಿಕೆಯ ತತ್ವ. ಇಂತಹ ವಿಶಿಷ್ಟ ಸಂಬಂಧದ ಹೊಳಹಿರುವ ಹಿಂದೂ ವಿವಾಹ ಪದ್ಧತಿಯನ್ನು ನಿರಾಕರಿಸಿ ಶಿಲಾಯುಗದ ರೀತಿ ನೀತಿಯಂತೆ ನಡೆದುಕೊಳ್ಳುತ್ತಿರುವ ಕೆಲವರ ವರ್ತನೆ ಭಾರತೀಯ ಸ್ಥಾಪಿತ ಸಂಪ್ರದಾಯ ಹಾಗೂ ಪರಂಪರೆ ಆಧಾರಿತ ಸಾಮಾಜಿಕ ವ್ಯವಸ್ಥೆಗೆ ದೊಡ್ಡ ಅಪಚಾರ.