ಯಾವುದು ಬರುತ್ತೆ ಯಾರಾಗಬಹುದು?

Advertisement

ಎಲ್ಲಿ ನೋಡಿದರಲ್ಲಿ ಯಾವುದು ಬರುತ್ತೆ ಯಾರಾಗ್ತಾರೆ ಎನ್ನುವುದೇ ಮನೆಮನೆ ಮಾತಾಗಿದೆ. ಮಟಮಟ ಮಧ್ಯಾಹ್ನ ಉರಿಬಿಸಿಲಿನಲ್ಲಿ ಕಾಲಿಗೆ ಚಪ್ಪಲಿ ಹಾಕಿಕೊಳ್ಳದೇ ಬಂದ ಕನ್ನಾಳ್ಮಲ್ಲ ಎದುರಿಗೆ ಬರುತ್ತಿದ್ದ ಮೇಕಪ್ ಮರೆಮ್ಮನನ್ನು ನಿಲ್ಲಿಸಿ ಏನ್ ಮೇಕಪ್ ಮರೆಮ್ನೋರೆ… ಯಾವುದು ಬರಬಹುದು ಯಾರಾಗಬಹುದು ಎಂದು ಕೇಳಿದಾಗ ಆಕೆ ಹೆಂಗೆ ಹೇಳಬೇಕಪ್ಪ ಎಲ್ಲವೂ ಅವನಿಚ್ಛೆ ಅಂದಳು. ನಿಮಗೆ ಪೊಲಿಟಿಕಲ್ ಟೇಸ್ಟೇ ಇಲ್ಲ ಬುಡು ಅನ್ನುತ್ತ ಮಲ್ಲ ಅಲ್ಲಿಂದ ಹೋದ. ನನಗೇ ಟೇಸ್ಟ್ ಇಲ್ಲ ಅನ್ನುತ್ತಿದ್ದಾನಲ್ಲ ಇವನು…. ಇವನಿಗೆ ಸರಿಯಾದ ಉತ್ತರವನ್ನೇ ಕೊಡುತ್ತೇನೆ ಅಂದು.. ಮರುಕ್ಷಣವೇ ಕರಿಭಾಗೀರತಿ ಮನೆಗೆ ಹೋಗಿ.. ಏನ್ ಭಾಗೀರತಿ? ಯಾವುದು ಬರುತ್ತೆ ಯಾರಾಗ್ತಾರೆ ಅಂದಳು. ಮಂಗಳವಾರ ದಿನ ನಮ್ಮ ಸೋದರ ಮಾವ ಬರ್ತದೆ… ಅದೇನೂ ಆಗಲಕ್ಕಿಲ್ಲ ಎಂದು ಮುಖ ಕಿವುಚಿದಳು. ಇವಳಿಗೆ ಏನೂ ಗೊತ್ತಿಲ್ಲ. ಇವಳಿಗಿಂತ ನಾನೇ ಬೆಸ್ಟು ಅಂದುಕೊಂಡಳು. ಅಲ್ಲಿಂದ ಹಾಲಿನ ವ್ಯಾಪಾರ ಮಾಡುತ್ತಿದ್ದ ಕರಿಭೀಮವ್ವನ ಮನೆಗೆ ಹೋದ ಮೇಕಪ್ ಮೇಡಂ. ಏನ್ ಕ.ಭೀ. ಯಾವುದು ಬರಬಹುದು ಯಾರಾಗಬಹುದು ಎಂದು ಕೇಳಿದಳು. ಹೆಂಗ ಹೇಳೋದು.. ನಾನು ಹೇಳಿ ಕಳಿಸಿದೀನಿ.. ಒಳ್ಳೆ ಎಮ್ಮೆ ಬರುತ್ತದೆ. ಯಾರಾಗಬಹುದು ಅಂದಿರೆಲ್ಲ… ಅದನ್ನು ಕಾಯಲು ಯಾರಾದರೂ ಆಗಬಹುದು ಅಂತ ಹೇಳಿದಳು.. ಅಯ್ಯೋ ಇವೆಲ್ಲ ವೇಸ್ಟ್ ಬಾಡಿಗಳು… ವೇಸ್ಟ್ ಬಾಡಿಗಳು ಅಂದುಕೊಂಡು ಜ್ಞಾನಿ ಗ್ಯಾನಮ್ಮಳನ್ನು ಕೇಳಿದರೆ ಆಕೆ ಜಾತ್ರೆ ಆದಮೇಲೆ ಹೇಳುತ್ತೇನೆ ಎಂದಳು. ಜಿಲಿಬಿಲಿ ಎಲ್ಲವ್ವನಂತೂ ಅದನ್ನು ನೀವು ಕೇಳಬಾರದು ನಾನು ಹೇಳಬಾರದು ಎಂದು ಮಾತು ಮುಗಿಸಿದಳು. ಇವೆಲ್ಲ ಹಂಗೆ ಎಂದು.. ಹೋಟೆಲ್ ಶೇಷಮ್ಮಳನ್ನು ಕೇಳಿದಾಗ.. ನೋಡು ಯಾವದನ ಬರಲಿ… ಯಾರನ ಆಗಲಿ.. ನನ್ನ ಹೋಟೆಲ್ ಉದ್ರಿ ತೀರಿಸೋರು ಬಂದರೆ ಸಾಕು ಎಂದು ಮುಖಕ್ಕೆ ಹೊಡೆದ ಹಾಗೆ ಹೇಳಿದಳು. ಕಂಟ್ರಂಗಮ್ಮತ್ತಿಯು ನೀನು ಜೂನ್ ೪ರ ಸಂಜೆ ಬಂದು ಭೇಟಿಯಾಗು ಆಗ ಕರೆಕ್ಟಾಗಿ ಹೇಳುತ್ತೇನೆ ಅಂದಳು.
ಇವೆಲ್ಲ ಇಷ್ಟೇ ಅಂದು ಮತ್ತೆ ಕನ್ನಾಳ್ಮಲ್ಲನ ಕಡೆಗೆ ಹೋಗಿ ನೋಡು ನಾನು ಊರತುಂಬ ಅಡ್ಡಾಡಿದೆ. ಕರೆಕ್ಟಾಗಿ ಯಾರೂ ಹೇಳಲಿಲ್ಲ. ನೀನೇ ಹೇಳಿಬಿಡು ನೋಡೋಣ ಅಂದಾಗ… ಮಲ್ಲ ತಲೆ ಕೆರೆದುಕೊಂಡು…. ನನಗೂ ಏನು ಗೊತ್ತಿಲ್ಲ. ನಿನ್ನೆ ರಾತ್ರಿ ಸೋದಿಮಾಮೋರು ಕನಸಿಗೆ ಬಂದು… ನೋಡಪ ಇಂಗಿಂಗೆ ಕೇಳಿಕೊಂಡು ಇಟ್ಟಿರು ಮತ್ತೆ ನಾನು ಕನಸಿಗೆ ಬಂದಾಗ ಯಾರ ಅಭಿಪ್ರಾಯ ಹೇಗಿದೆ ಎಂದು ಹೇಳುವಿಯಂತೆ ಅಂದರು. ಅದಕ್ಕಾಗಿ ನಿಮಗೆ ಕೇಳಿದೆ ಅಂದಾಗ ತಥ್ ಇವನ ಅಂದುಕೊಂಡ ಮರೆಮ್ಮಳು… ಸೋದಿ ನನ್ನ ಕನಸಿಗೂ ಬಂದು ಕೇಳಬಹುದು ಎಂದು ಊರೂರು ಅಡ್ಡಾಡುತ್ತ.. ಯಾವುದು ಬರಬಹುದು ಯಾರು ಆಗಬಹುದು ಎಂದು ಕೇಳುತ್ತಲೇ ಇದ್ದಾಳೆ.