ಸಚಿವ ಖರ್ಗೆಗೆ ಜೀವ ಬೆದರಿಕೆ ಪತ್ರ

Advertisement

ಕಲಬುರಗಿ: ಜಿಲ್ಲಾ ಉಸ್ತುವಾರಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಎನ್ ಕೌಂಟರ್ ಮಾಡುವುದಾಗಿ ಬೆದರಿಕೆ ಹಾಕಿದ ಪತ್ರ ಬಂದಿದ್ದು, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ ಎಂಬ ಅಚ್ಚರಿಯ ವಿಷಯವನ್ನು ಸ್ವತಃ ಸಚಿವ ಪ್ರಿಯಾಂಕ್ ಖರ್ಗೆ ಅವರೆ ಬಹಿರಂಗ ಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಜಿಲ್ಲಾ‌ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ದೂರಿನ ಪ್ರತಿ ತೋರಿಸಿ ಘಟನೆ ಬಗ್ಗೆ ವಿವರಣೆ ನೀಡಿದರು. ಬಾಯಲ್ಲಿ ಹೇಳಲು ಆಗದ ಮತ್ತು ಸುಶಿಕ್ಷಿತರು ಓದಲು ಸಹ ಆಗದ ಅತ್ಯಂತ ಕೀಳು ಮಟ್ಟದ ಶಬ್ದಗಳನ್ನು ಬಳಸಿ ಬೆದರಿಕೆ ಪತ್ರ ಬಂದಿದೆ. ನನ್ನ ಕೊಲೆ ಮಾಡಿಯಾದರೂ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಂತೆ ಕಾಣುತ್ತಿರುವ ಕಾಣದ ಕೈಗಳು ಈ ರೀತಿ ಬೆದರಿಕೆ ಹಾಕಿದರೆ ಇಲ್ಲಿ ಅಂಜುವವರು ಯಾರು ಇಲ್ಲ. ನಾವು ಸಂವಿಧಾನ ಅಡಿಯಲ್ಲಿ ಚುನಾವಣೆ ನಡೆಸುತ್ತೆವೆ ಎಂದರು.

ಚಿಂಚೋಳಿ ಸಂಸದರೆಂದೆ ಡಾ.ಜಾಧವ್ ಅವರನ್ನು ಕರೆದ ಸಚಿವರು, ಮುಕ್ತ ಚುನಾವಣೆ ಬಗ್ಗೆ ಅನುಮಾನಿಸಿ ಹೇಳಿಕೆ ನೀಡುತ್ತಿರುವುದು ಗಮನಿಸಿದರೆ ಗದ್ದಲ ಎಬ್ಬಿಸಿ ಗೆಲ್ಲುವ ಯೋಚನೆಯಲ್ಲಿ ಇದ್ದಾರೆ. ಇದು ಎಂದಿಗೂ ಸಾಧ್ಯವಿಲ್ಲ ಎಂದು ಮಾತಿನ ಮೂಲಕ ತಿವಿದರು.

ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣಪ್ಪ ಕಮಕನೂರ , ಪ್ರಮುಖರಾದ ಪ್ರವೀಣ ಪಾಟೀಲ್ ಹರವಾಳ, ಅರವಿಂದ ಚವ್ಹಾಣ, ಡಾ.ಕಿರಣ ದೇಶಮುಖ, ಶಿವಾನಂದ ಹೊನಗುಂಟ, ಈರಣ್ಣ ಝಳಕಿ, ಮಹಾಂತಪ್ಪ ಸಂಗಾವಿ ಮತ್ತಿತರು ಇದ್ದರು.