ಸಂಶಯಿಸುತ್ತಿರುವವರು ಯಾರು?

Advertisement

ಸಂಶಯಗಳಿರುವುದು ಒಳ್ಳೆಯದು. ಅದರ ಬಗ್ಗೆ ಸಂಶಯ ಬೇಡ. ಆದರೆ ಸಂಶಯ ನಿಮ್ಮ ಹೃದಯದೊಳಗೆ ಹೊಕ್ಕು, ಅದು ನಿಮ್ಮ ಸ್ವಭಾವವೇ ಆಗಿಬಿಟ್ಟರೆ ಅದೊಂದು ಖಾಯಿಲೆ. ಅದನ್ನು ಭ್ರಮೆ ಎನ್ನುತ್ತಾರೆ. ಎಲ್ಲವನ್ನೂ, ನಿಮ್ಮನ್ನೂ ಸಂಶಯಿಸಿದರೆ ಅದನ್ನು ಭ್ರಮೆ ಎನ್ನುತ್ತಾರೆ. ಪರಮ ಶಕ್ತಿಯ, ಅಸಾಧಾರಣ ಶಕ್ತಿಯ ಇರುವಿಕೆಯನ್ನು ಸಂಶಯಿಸದೆ ಇದ್ದರೆ ನಿಮ್ಮನ್ನು ನಾಸ್ತಿಕರು ಎನ್ನುತ್ತಾರೆ.
ನಾಸ್ತಿಕರಿಗೆ ಪರಮಚೇತನದ ಬಗ್ಗೆ ಸಂಶಯವೇ ಇರುವುದಿಲ್ಲ. ಅಂತಹದ್ದೇನೂ ಇಲ್ಲ ಎಂದುಕೊಳ್ಳುತ್ತಾರೆ. ಅವರಿಗೆ ತಿಳಿದಿರುವುದಕ್ಕಿಂತಲೂ ಹೆಚ್ಚಾಗಿರುವ ಏನೋ ಒಂದಿದೆ ಎಂದು ಅವರಿಗೆ ಅನಿಸುವುದೇ ಇಲ್ಲ. ಅವರಲ್ಲಿ ವಿಶ್ವಾಸವೂ ಇರುವುದಿಲ್ಲ. ಭ್ರಮೆಯಲ್ಲಿ ಇರುವವರು ಯಾರ ಮೇಲೂ ಮತ್ತು ಅವರ ಮೇಲೂ ವಿಶ್ವಾಸವನ್ನು ಇಡುವುದಿಲ್ಲ, ಇದೊಂದು ಮಾನಸಿಕ ಖಾಯಿಲೆ.
ಸ್ವಲ್ಪ ಸಂಶಯ ಒಳ್ಳೆಯದು. ಆದರೆ ಸಂಶಯವು ನಿಮ್ಮದೇ ಸ್ವಭಾವ ಆಗಿಬಿಟ್ಟಾಗ, ಈ ಜಗತ್ತಿನಲ್ಲೂ ಮತ್ತು ಆಧ್ಯಾತ್ಮಿಕತೆಯಲ್ಲೂ ಜಯವನ್ನು ಸಾಧಿಸಲು ಸಾಧ್ಯವಿಲ್ಲ. ಇಡೀ ವಿಶ್ವವು ಒಂದು ಮಟ್ಟದ ವಿಶ್ವಾಸದಿಂದಾಗಿ ನಡೆಯುತ್ತದೆ. ಬ್ಯಾಂಕಿನ ಮೇಲೆ ವಿಶ್ವಾಸವನ್ನು ಇಟ್ಟಿರುವುದರಿಂದ ಬ್ಯಾಂಕಿನಲ್ಲಿ ನಿಮ್ಮ ಹಣವನ್ನು ಇಡುತ್ತೀರಿ.
ನೀವು ವಿದ್ಯುಚ್ಛಕ್ತಿಯ ಹಣವನ್ನು ಪಾವತಿಸುತ್ತೀರಿ ಎಂಬ ನಂಬಿಕೆಯಿಂದ ವಿದ್ಯುಚ್ಛಕ್ತಿ ಮಂಡಲಿಯು ನಿಮಗೆ ವಿದ್ಯುಚ್ಛಕ್ತಿಯ ಸರಬರಾಜನ್ನು ಮಾಡುತ್ತದೆ.
ತಿಂಗಳು ಮುಗಿದ ನಂತರ ಫೋನಿನ ಹಣವನ್ನು ಪಾವತಿಸುತ್ತೀರೆಂಬ ವಿಶ್ವಾಸದಿಂದ ಕಂಪನಿಯವರು ನಿಮಗೆ ಫೋನಿನ ಸಂಪರ್ಕವನ್ನು ಒದಗಿಸಿ ಕೊಡುತ್ತಾರೆ. ಯಾರೂ, ಯಾರನ್ನೂ ನಂಬದಿದ್ದರೆ ಈ ಭೂಮಿಯ ಮೇಲೆ ವ್ಯಾಪಾರ ಆಗಲು ಹೇಗೆ ಸಾಧ್ಯ? ಆಗಲು ಸಾಧ್ಯವೆ? ಮನೆಯನ್ನು ಕೊಳ್ಳಲು, ಮನೆ ಮಾರುವವರಿಗೆ ಮುಂಚಿತವಾಗಿಯೇ ಹಣವನ್ನು ಕೊಡುತ್ತಾರೆ
ಮೊದಲು ಮನೆ ಕೊಡು. ನಂತರ ಹಣ ಕೊಡುತ್ತೇನೆ' ಎನ್ನಲು ಸಾಧ್ಯವಿಲ್ಲ.ಮೊದಲು ಹಣ ಕೊಡು, ನಂತರ ಮನೆ ಕೊಡುತ್ತೇನೆ’ ಎಂದು ಮನೆಯ ಮಾಲೀಕರು
ಹೇಳುತ್ತಾರೆ. ಇಬ್ಬರೂ ಪಟ್ಟು ಹಿಡಿದರೆ ವ್ಯಾಪಾರವಾಗಲು ಸಾಧ್ಯವೇ ಇಲ್ಲ. ಪರಸ್ಪರ ವಿಶ್ವಾಸದಿಂದ ಇಡೀ ಜಗತ್ತು ನಡೆಯುತ್ತದೆ.
ಎಲ್ಲಾ ಚಟುವಟಿಕೆಯೂ ಆತ್ಮವಿಶ್ವಾಸದಿಂದ ಆಗುತ್ತದೆ. ಏನನ್ನೂ ನಂಬುವುದಿಲ್ಲ ಎನ್ನುವವರು ತಮ್ಮನ್ನಾದರೂ ನಂಬುತ್ತಾರೆ. ಏನನ್ನೂ ನಂಬುವುದಿಲ್ಲ ಎಂಬ ಅವರ ಮಾತನ್ನಾದರೂ ನಂಬುತ್ತಾರೆ. ಆದ್ದರಿಂದ, ನಿಮ್ಮನ್ನು ತಿಳಿದುಕೊಳ್ಳಿ. “ನಾನು ಹೇಳುತ್ತಿರುವುದನ್ನು ನಾನು ನಂಬುವುದಿಲ್ಲ”ಎಂದು ಯಾರೂ ಹೇಳುವುದಿಲ್ಲ. ಅವರ ಮಾತನ್ನು ಅವರು ನಂಬುತ್ತಾರೆ. ಅವರ ಮಾತನ್ನು ನಂಬುತ್ತಿರುವ `ಅವರು’ ಯಾರು? ಅದನ್ನು ತಿಳಿದುಕೊಳ್ಳಬೇಕು.