ಕಲಬುರಗಿ: ಸಂಯುಕ್ತ ಕರ್ನಾಟಕ' ಪತ್ರಿಕೆಯ ಕಲಬುರಗಿ ಆವೃತ್ತಿಯ ಬೆಳ್ಳಿಹಬ್ಬ
ಕಲ್ಯಾಣ ಸಿರಿ’ ಇಲ್ಲಿನ ಖಮಿತಕರ್ ಭವನದಲ್ಲಿ ಶುಕ್ರವಾರ ಅತ್ಯಂತ ಸಡಗರ ಮತ್ತು ಸಂಭ್ರಮಗಳಿಂದ ಆರಂಭವಾಯಿತು. ಎರಡು ದಿನಗಳ ಈ ಅರ್ಥಪೂರ್ಣ ರಜತೋತ್ಸವವನ್ನು ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಿದರು.ಸಂಯುಕ್ತ ಕರ್ನಾಟಕ ನಾಡಿನ ಮಾರ್ಗದರ್ಶಿ. ಸಮಗ್ರ ಅಭಿವೃದ್ಧಿ ಮತ್ತು ಶಿಕ್ಷಣವೇ ಈ ಪತ್ರಿಕೆಯ ಗುರಿ. ಶತಮಾನೋತ್ಸವ ಹೊಸ್ತಿಲಿನಲ್ಲಿರುವ ಅಕ್ಷರದ ಹಿರಿಯಣ್ಣ ಕಲಬುರಗಿ ಆವೃತ್ತಿಯ ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿರುವುದು ಅತ್ಯಂತ ಸಂತೋಷದ ಸಂಗತಿ' ಎಂದು ಖರ್ಗೆ ಮನದುಂಬಿ ಹೇಳಿದಾಗ, ಕಿಕ್ಕಿರಿದು ಸೇರಿದ್ದ ಸಭಿಕರು ದೀರ್ಘ ಕರತಾಡನ ಮಾಡಿದರು. ಪತ್ರಿಕೆಯ ಬೆಳ್ಳಿಹಬ್ಬವನ್ನು ಕಲ್ಯಾಣ ಕರ್ನಾಟಕ ಪ್ರಾಂತ್ಯದ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಆಯೋಜಿಸಲಾಗಿದ್ದು, ಮೊದಲ ದಿನ ಘನವಾದ ಚಿಂತನ ಮಂಥನಗಳು ಹಾಗೂ ಸಂಗೀತ ಸಂಜೆ ನಡೆದದ್ದು ಗಮನಾರ್ಹ. ಅದರಲ್ಲೂ ವಿಶೇಷವಾಗಿ ಇಡೀ ಪ್ರಾಂತ್ಯದ ಎಲ್ಲ ಏಳು ಜಿಲ್ಲೆಗಳನ್ನು ಅಭಿವೃದ್ಧಿ ಮಾಡೋದು ಹೇಗೆ ಎನ್ನುವ ಪ್ರಶ್ನೆಯೊಂದಿಗೆ ಏರ್ಪಡಿಸಲಾಗಿದ್ದ
371-ಜೆ: ಕಲ್ಯಾಣ ಕರ್ನಾಟಕದ ಅಭ್ಯುದಯ ಏನು, ಎಂತು’ ಗೋಷ್ಠಿ ಇಡೀ ಕಲ್ಯಾಣ ಸಿರಿ' ಹೆಸರಿಗೆ ಅನ್ವರ್ಥವಾಗಿತ್ತು. ಪ್ರಾಸ್ತಾವಿಕ ಭಾಷಣ ಮಾಡಿದ ಸಂಯುಕ್ತ ಕರ್ನಾಟಕ ಸಂಪಾದಕ ಮಹಾಬಲ ಸೀತಾಳಬಾವಿ,
ವಿಶೇಷ ಸ್ಥಾನಮಾನ ದೊರಕಿಯೂ ಅಸಮಾನತೆ ಮುಂದುವರಿದಿರಲು ಮತ್ತು ಅಭಿವೃದ್ಧಿಯಲ್ಲಿ ಹಿನ್ನಡೆ ಕಾಣಲು ಕಾರಣವೇನು? ಎಂಬ ಆತ್ಮಾವಲೋಕನ ನಡೆಯಬೇಕಿದೆ’ ಎಂದರು. ಈ ಮೂಲಕ ಕಲ್ಯಾಣ ಪ್ರಾಂತ್ಯದ ಅಭಿವೃದ್ಧಿ ಸಂವಾದಕ್ಕೆ ದಿಕ್ಸೂಚಿ ನೀಡಿದಂತಾಯಿತು.
ರಾಜಕಾರಣಿಗಳಿಂದ ಅಭಿವೃದ್ಧಿಯಲ್ಲಿ ಹಿನ್ನಡೆಯಾಗುತ್ತಿದೆಯೇ? ಅಥವಾ ಅನುದಾನ ಬಳಕೆಯಲ್ಲಿ ಎಡವಲಾಗಿದೆಯೇ? ಅಂತಿಮವಾಗಿ ಪ್ರಾಂತ್ಯದ ಉದ್ಧಾರಕ್ಕೆ ಏನು ಸಂಕಲ್ಪ' ಎಂದು ಕೇಳುವ ಮೂಲಕ ಸಂವಾದ ತೆರೆದುಕೊಂಡಿತು. ಗೋಷ್ಠಿಯನ್ನು ನಿರ್ವಹಿಸಿದ ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್,
ಕಲ್ಯಾಣ ಕರ್ನಾಟಕದಲ್ಲಿ ಸುಸ್ಥಿರ ಅಭಿವೃದ್ಧಿ ಯೋಜನೆಗಳನ್ನು ಮಾಡಿ’ ಎಂದು ಈ ಭಾಗದ ನಾಯಕರನ್ನು ಉದ್ದೇಶಿಸಿ ಹೇಳಿದರು. ಕನಿಷ್ಠ 50 ವರ್ಷದ ದೀರ್ಘಾವಧಿ ಅಭಿವೃದ್ಧಿ ಕಾರ್ಯಕ್ರಮಗಳು, ಅಲ್ಲದೇ ೫, ೧೦, ೧೫ ಮತ್ತು ೨೦ ವರ್ಷದ ಕ್ರಿಯಾ ಯೋಜನೆಗಳನ್ನು ಸರ್ಕಾರ ರೂಪಿಸಬೇಕು. ಅನುದಾನ ಬಳಕೆಯಲ್ಲಿ ತಪ್ಪುಗಳಾಗದಂತೆ ನೋಡಿಕೊಳ್ಳಬೇಕು ಮುಂತಾದ ಸಲಹೆಗಳನ್ನು ನೀಡಿದರು.
ವಿದ್ಯಾರ್ಥಿಗಳು, ಹೋರಾಟಗಾರರು ಮತ್ತು ಈ ಭಾಗದ ಪ್ರಮುಖರು ಕೇಳಿದ ಪ್ರಶ್ನೆಗಳಿಗೆ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್ ಮತ್ತು ಈಶ್ವರ ಖಂಡ್ರೆ ಉತ್ತರಿಸಿದ್ದು ಸಾಕಷ್ಟು ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ ವಿದ್ಯಮಾನ.
ಇದಾದ ನಂತರದ ಸಹಕಾರ ಗೋಷ್ಠಿಯಲ್ಲಿ ಉಪನ್ಯಾಸ ನೀಡಿದ ಸುಕೋ ಬ್ಯಾಂಕ್ ಅಧ್ಯಕ್ಷ ಮನೋಹರ ಮಸ್ಕಿ, `ಮುಂದಿನ ಎರಡು ತಿಂಗಳಲ್ಲಿ ಸುಕೋ ಬ್ಯಾಂಕ್ ರಾಜ್ಯದ ಶೆಡ್ಯೂಲ್ಡ್ ಬ್ಯಾಂಕ್‌ಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ’ ಎನ್ನುವ ಮಾಹಿತಿ ನೀಡಿದ್ದು ಮೊದಲ ದಿನದ ಹೈಲೈಟ್‌ಗಳಲ್ಲಿ ಒಂದು. ಕಲ್ಯಾಣ ಕರ್ನಾಟಕದಲ್ಲಿ ಸಹಕಾರ ಚಳವಳಿ ಹೇಗೆಲ್ಲ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಯಾವೆಲ್ಲ ರಚನಾತ್ಮಕ ಸಂಗತಿಗಳು ಈ ಆಂದೋಲನದಿಂದ ಆಗುತ್ತಿವೆ ಎಂಬುದನ್ನು ಮಸ್ಕಿ ವಿವರಿಸಿದ್ದು ಜನತೆಗೆ ಖುಷಿ ತಂದಿತು.