ತುಮಕೂರು: ವಸಂತನರಸಾಪುರ ಕೈಗಾರಿಕಾ ಪ್ರದೇಶದ ಲಾರೋಸ್ ಬಯೋ ರಾಸಾಯನಿಕ ಕಾರ್ಖಾನೆಯೊಂದ ಸಂಪು ಸ್ವಚ್ಛಗೊಳಿಸಲು ಹೋದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು ಮತ್ತಿಬ್ಬರು ಅಸ್ವಸ್ಥರಾಗಿದ್ದಾರೆ. ಪ್ರತಾಪ್ (೨೩) ವೆಂಕಟೇಶ್(೩೨) ಮೃತ ದುರ್ದೈವಿಗಳು.
ಶಿರಾ ತಾಲೂಕಿನ ತರೂರು ಗ್ರಾಮದ ಮಂಜಣ್ಣ(೪೨) ಹಾಗೂ ಯುವರಾಜ್ (೩೨) ಅಸ್ವಸ್ಥರಾಗಿದ್ದು ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಧುಗಿರಿ ತಾಲೂಕಿನ ಮಾಗೋಡು ನಿವಾಸಿಯಾದ ಪ್ರತಾಪ್ ಕಾರ್ಖಾನೆಯ ಸೆಕ್ಯೂರಿಟಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.
೧ ಲಕ್ಷ ಲೀಟರ್ ಸಾಮರ್ಥ್ಯದ ಸಂಪನ್ನು ಮೊದಲು ಮಂಜಣ್ಣ ಹಾಗೂ ಯುವರಾಜ್ ಎಂಬುವವರು ಸ್ವಚ್ಛಗೊಳಿಸಲು ಹೋಗಿದ್ದು ಅವರಿಗೆ ಉಸಿರಾಟದ ತೊಂದರೆ ಉಂಟಾಗಿದೆ. ಅದನ್ನು ನೋಡಿದ ಪ್ರತಾಪ್ ವೆಂಕಟೇಶ್ ಮಂಜಣ್ಣ ಹಾಗೂ ಯುವರಾಜ್ ಅವರನ್ನು ಉಳಿಸಲು ಹೋಗಿ ಸಾವನ್ನಪ್ಪಿದ್ದಾರೆ.
ಬೆಂಗಳೂರು ಮೂಲದ ಈ ಕಾರ್ಖಾನೆಯು ಸುಮಾರು ನಾಲ್ಕು ವರ್ಷಗಳಿಂದ ನಡೆಯುತ್ತಿದ್ದು ಕಾರ್ಖಾನೆಯಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಆಹಾರ ಉತ್ಪಾದನೆ ಮಾಡಲಾಗುತ್ತದೆ. ಸುಮಾರು ೨೦೦ ಜನ ಕಾರ್ಮಿಕರಿದ್ದು ಪ್ರತಿದಿನ ನಾಲ್ಕು ಪಾಳಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಮೃತಪಟ್ಟಿರುವ ಪ್ರತಾಪ್ ಕಾಂಟ್ರಾಕ್ಟ್ ಬೇಸಿಸ್ ಕಾರ್ಮಿಕರಾಗಿದ್ದರೆ, ಉಳಿದ ಮೂರು ಜನ ಸಬ್ ಕಾಂಟ್ರಾಕ್ಟರ್ ಕಡೆಯಿಂದ ಬಂದ ಕೆಲಸಗಾರರಾಗಿದ್ದರು. ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.