ಸಂತೋಷ್ ಲಾಡ್‌ಗೆ ಫೋಬಿಯಾ ಸಮಸ್ಯೆ

ಹುಬ್ಬಳ್ಳಿ: ಸಚಿವ ಸಂತೋಷ ಲಾಡ್ ಅವರಿಗೆ ಫೋಬಿಯಾ ಮತ್ತು ನಾರ್ಸಿಸಿಸ್ಟಿಕ್ ಪರ್ಸನಾಲಿಟಿ ರೋಗ ಕಾಡುತ್ತಿದೆ. ಹೀಗಾಗಿ, ಅವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಅವರ ಮಾತಿಗೆ ಕಿವಿಗೊಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಆಹಾರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಶನ್ ಸಿಂದೂರ್ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಸಂತೋಷ ಲಾಡ್ ಅವರು ಪ್ರಧಾನಿ ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ಮಾತನಾಡಿದರೆ ತಾವು ದೊಡ್ಡವರಂತೆ ಕಾಣಿಸುವೆ ಎಂಬ `ಫೋಬಿಯಾ’ದಿಂದ ಬಳಲುತ್ತಿದ್ದಾರೆ. ದೊಡ್ಡವರ ಬಗ್ಗೆ ಮಾತನಾಡಿದರೆ ದೊಡ್ಡವನಾಗುತ್ತೇನೆಂಬ ಭ್ರಮೆ ಬಿಟ್ಟು, ಯುಪಿಎ ಕಾಲದಲ್ಲಿ ಅದೆಷ್ಟು ಉಗ್ರರ ದಾಳಿ ನಡೆದಿವೆ ಎಂಬುದನ್ನು ಪರಾಮರ್ಶಿಸಲಿ ಎಂದರು.
ಆಪರೇಶನ್ ಸಿಂದೂರದ ಬಗ್ಗೆ ಕಾಂಗ್ರೆಸ್ ಮುಖಂಡರಲ್ಲೇ ಭಿನ್ನಾಭಿಪ್ರಾಯ ಇದೆ. ನಮ್ಮ ದೇಶದ ಸೈನಿಕರ ಬಗ್ಗೆಯೇ ಅವರಿಗೆ ಅನುಮಾನ. 9 ಉಗ್ರರ ತಾಣ, ಜನವಸತಿ ಪ್ರದೇಶದಲ್ಲಿ ಇದ್ದರೂ ಉಗ್ರರ ತಾಣಗಳನ್ನು ಮಾತ್ರ ನಮ್ಮ ಸೇನೆ ನಾಶ ಮಾಡಿದೆ. ಇದಕ್ಕೆ ಇಂಟಲಿಜೆನ್ಸ್, ಭಾರತದ ಸೈನ್ಯ ಶಕ್ತಿಯೇ ಕಾರಣ. ಆದರೆ, ಕಾಂಗ್ರೆಸ್ ನಾಯಕರು ನಮ್ಮ ಸೈನ್ಯವನ್ನು ನಂಬುವುದಿಲ್ಲ. ಚುನಾವಣೆಯಲ್ಲಿ ಸೋತಾಗ ಚುನಾವಣೆ ಪ್ರಕ್ರಿಯೆ ಟೀಕಿಸುತ್ತಾರೆ. ತಮ್ಮ ವಿರುದ್ಧ ತೀರ್ಪು ಬಂದಾಗ ಸುಪ್ರೀಂಕೋರ್ಟ್ ಟೀಕಿಸುತ್ತಾರೆ. ಕಾಂಗ್ರೆಸ್ ಮುಖಂಡರಿಗೆ ರಾಷ್ಟ್ರಪತಿ ಅವರಲ್ಲೂ ನಂಬಿಕೆ ಇಲ್ಲ ಎಂದು ಕಿಡಿಕಾರಿದರು.
ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಬಿಜೆಪಿ ಸಚಿವನ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅದರ ಬಗ್ಗೆ ಪಕ್ಷದ ಆಂತರಿಕ ವೇದಿಕೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.