ಉಡುಪಿ: ಮಹಿಳಾ ಶಕ್ತಿ ಯೋಜನೆಯಡಿ ಶೋಭಕ್ಕಂಗೂ ಬಸ್ ಪ್ರಯಾಣ ಫ್ರೀ ಎಂಬ ಕಾಂಗ್ರೆಸ್ ಹೇಳಿಕೆ ದುರಹಂಕಾರದಿಂದ ಕೂಡಿದ್ದು, ಅವರ ಅಹಂಕಾರ ಸದ್ಯದಲ್ಲೇ ಇಳಿಯುತ್ತದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೋಭಕ್ಕಂಗೂ ಫ್ರೀ ಎಂಬ ಕಾಂಗ್ರೆಸ್ ಟಾಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕರ್ನಾಟಕ ಘೋಷಿಸಿರುವ ಗ್ಯಾರಂಟಿಗಳ ಬಗ್ಗೆ ಸದ್ಯ ಏನೂ ಮಾತನಾಡುವುದಿಲ್ಲ. ಯೋಜನೆ ಅನುಷ್ಠಾನ ಆಗುವ ವರೆಗೂ ಕಾಯೋಣ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆ ಹೇಗೆ? ರಾಜ್ಯದ ಪ್ರಸಕ್ತ ಆರ್ಥಿಕ ಪರಿಸ್ಥಿತಿ ಹಾಗೂ ಪಡೆಯಬಹುದಾದ ಸಾಲದ ಪ್ರಮಾಣ ಇತ್ಯಾದಿಗಳೆಲ್ಲದರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಸರಕಾರ ಜನತೆಗೆ ನೀಡಬೇಕಾಗಿದೆ. ಅನೇಕ ಬಾರಿ ಬಜೆಟ್ ಮಂಡಿಸಿದ ಅನುಭವಿ ಮುಖ್ಯಮಂತ್ರಿಗೆ ಇದೆಲ್ಲ ತಿಳಿದಿದೆ ಎಂದು ಸಚಿವೆ ಶೋಭಾ ಕುಟುಕಿದರು.
ಮುಂದಿನ ಲೋಕಸಭಾ ಚುನಾವಣೆ ಮೇಲೆ ರಾಜ್ಯದ ಫಲಿತಾಂಶ ಪರಿಣಾಮ ಬೀರದು. ಜನತೆ ದೇಶವನ್ನು ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.