ಶಿಗ್ಗಾವಿ ಕೊಲೆ ಪ್ರಕರಣ, ಐವರ ಬಂಧನ

ಕೊಲೆ ಆರೋಪಿಗಳ ಕಾಲಿಗೆ ಗುಂಡು

ಹಾವೇರಿ: ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಮುಖಂಡ, ಗುತ್ತಿಗೆದಾರ ಶಿವಾನಂದ ಕುನ್ನೂರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಗಳನ್ನು ಬಂಧಿಸಿ ಕರೆತರುವಾಗ ಹಾನಗಲ್ಲ ತಾಲೂಕು ಕೊಂಡಚ್ಚಿ ಬಳಿ ಪೊಲೀಸರು ಮತ್ತು ಆರೋಪಿಗಳ ನಡುವೆ ಗಲಾಟೆ ನಡೆದಿದ್ದು, ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

ಆಗ ತಮ್ಮ ರಕ್ಷಣೆಗಾಗಿ ಶಿಗ್ಗಾವಿ ಸಿಪಿಐ ಸತ್ಯಪ್ಪ ಹಾಗೂ ಹಾನಗಲ್ ಪಿಎಸ್ ಐ ಸಂಪತ್ ಆನಿಕಿವಿ ಅವರು ಪ್ರಮುಖ ಆರೋಪಿಗಳಾದ ನಾಗರಾಜ ಸವದತ್ತಿ ಹಾಗೂ ಅಶ್ರಫ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡು ಆರೋಪಿಗಳ ಕಾಲಿಗೆ ತಗಲಿದ್ದು, ಆರೋಪಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ.

ಇನ್ನುಳಿದ ಆರೋಪಿಗಳಾದ ಹನುಮಂತ, ಸುದೀಪ ಹಾಗೂ ಸುರೇಶ ಅವರನ್ನೂ ಪೊಲೀಸರು ಬಂಧಿಸಿದ್ದಾರೆ.

‘ಫೈರಿಂಗ್ ವೇಳೆ ಗಾಯಗೊಂಡಿರುವ ಪೊಲೀಸರಾದ ರವಿ ಹಾಗೂ ಹರೀಶ ಅವರನ್ನು ಸಹ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಎಎಸ್ಪಿ ಎಲ್. ವೈ. ಶಿರಕೋಳ ಮಾಹಿತಿ ನೀಡಿದ್ದಾರೆ.