ಶಿಕ್ಷಣ ದೊರಕದಿದ್ದರೆ ಸ್ವಾಭಿಮಾನಿಗಳಾಗಿ ಇರಲು ಸಾಧ್ಯವೇ ಇಲ್ಲ

ಗದಗ: ಶಿಕ್ಷಣ ದೊರಕದಿದ್ದರೆ ಸ್ವಾಭಿಮಾನಿಗಳಾಗಿ ಇರಲು ಸಾಧ್ಯವೇ ಇಲ್ಲ. ನನಗೆ ರಾಜಪ್ಪ ಎನ್ನುವ ಶಿಕ್ಷಕರು ಸಿಗದೇ ಹೋಗಿದ್ದರೆ ನನಗೆ ಶಿಕ್ಷಣವೂ ಸಿಗುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಕರ್ನಾಟಕ ಕುರುಬರ ಸಂಘ ಆಯೋಜಿಸಿದ್ದ ಕರ್ನಾಟಕ ಕುರುಬರ ಸಹಕಾರ ಪತ್ತಿನ ಸಂಘದ ಶತಮಾನೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ನೂರು ವರ್ಷಗಳ ಹಿಂದೆಯೇ ಕುರುಬ ಸಮಾಜವನ್ನು ಸಂಘಟಿಸಿ ಸಹಕಾರ ಸಂಘ ಸ್ಥಾಪಿಸಿದ್ದು ಅತ್ಯಂತ ಮುಂದಾಲೋಚನೆಯ ಸಾಮಾಜಿಕ ನ್ಯಾಯದ ಕಾರ್ಯ. ಶಿಕ್ಷಣ-ಸಂಘಟನೆ-ಹೋರಾಟ ಅಂಬೇಡ್ಕರ್ ಅವರು ದೇಶದ ಹಿಂದುಳಿದವರಿಗೆ ಕೊಟ್ಟಿರುವ ಮಂತ್ರ. ಆದರೆ, ಸಂವಿಧಾನ ಜಾರಿಗೆ ಮೊದಲೇ ಮುಂದಾಲೋಚನೆಯಿಂದ ಪತ್ತಿನ‌ ಸಹಕಾರ ಸಂಘ ಸ್ಥಾಪಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯ.

ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಶೂದ್ರ ವರ್ಗದ ಜನ‌ ಹಿಂದುಳಿಯಲು ಅವರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದೇ ಪ್ರಮುಖ ಕಾರಣ. ಶೂದ್ರರು, ದಲಿತರು ಮಾತ್ರ ಶಿಕ್ಷಣ ಪಡೆಯುವಂತಿರಲಿಲ್ಲ. ಅಂಬೇಡ್ಕರ್ ಅವರ ಜೀವಮಾನದ ಹೋರಾಟವೇ ಈ‌ ಅಸಮಾನತೆಯನ್ನು ಅಳಿಸುವುದಾಗಿತ್ತು. ಇದಕ್ಕೆ ಶಿಕ್ಷಣವೇ ಪ್ರಮುಖ‌ ಅಸ್ತ್ರ ಎಂದು ಅಂಬೇಡ್ಕರ್ ಮನಗಂಡಿದ್ದರು. ಶಿಕ್ಷಣ ದೊರಕದಿದ್ದರೆ ಸ್ವಾಭಿಮಾನಿಗಳಾಗಿ ಇರಲು ಸಾಧ್ಯವೇ ಇಲ್ಲ. ನನಗೆ ರಾಜಪ್ಪ ಎನ್ನುವ ಶಿಕ್ಷಕರು ಸಿಗದೇ ಹೋಗಿದ್ದರೆ ನನಗೆ ಶಿಕ್ಷಣವೂ ಸಿಗುತ್ತಿರಲಿಲ್ಲ, ನಾನು ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ. ಹಸು ಕಾಯ್ಕೊಂಡು ಇರಬೇಕಾಗಿತ್ತು. ಇದೇ ಕಾರಣಕ್ಕೆ ನಮ್ಮ ಸರ್ಕಾರ ಶಿಕ್ಷಣ – ಆರೋಗ್ಯ – ಅನ್ನಕ್ಕೆ ಪ್ರಮುಖ ಆದ್ಯತೆ ನೀಡುತ್ತಿದೆ ಎಂದಿದ್ದಾರೆ.