ಶಾಸಕ ಸುನಿಲ್ ಕುಮಾರ್ ಅವರಿಂದ ನೈತಿಕ ಪಾಠ ಕಲಿಯಬೇಕಾಗಿಲ್ಲ

ಉಡುಪಿ: ಶಾಸಕ ಸುನಿಲ್ ಕುಮಾರ್ ಅವರಿಂದ ನೈತಿಕ ಪಾಠ ಕಲಿಯಬೇಕಾಗಿಲ್ಲ.‌ ನೈತಿಕತೆಯ ಬಗ್ಗೆ ಅವರು ತಿಳಿದುಕೊಂಡು ಮಾತನಾಡಲಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಬಗ್ಗೆ ಮಾತನಾಡುವ ಸಚಿವರಿಗೆ ನೈತಿಕತೆ ಇಲ್ಲ ಎಂಬ ಸುನಿಲ್ ಕುಮಾರ್ ಆರೋಪಕ್ಕೆ ಶನಿವಾರ ಪ್ರತಿಕ್ರಿಯಿಸಿದ ಸಚಿವೆ ಹೆಬ್ಬಾಳ್ಕರ್, ಉಸ್ತುವಾರಿ ಸಚಿವೆಗೆ ನೈತಿಕತೆ ಇಲ್ಲ ಅಂದರೆ ಏನು? ಸುನಿಲ್ ಕುಮಾರ್ ಬಹಳ ಒಳ್ಳೆಯ ಮಾತುಗಾರ. ಅವರು ತಾನೇ ಬುದ್ಧಿವಂತ, ಸರ್ವಜ್ಞ; ಬೇರೆಯವರೆಲ್ಲ ದಡ್ಡರು ಎಂದು ತಿಳಿದುಕೊಂಡಿದ್ದಾರೆ ಎಂದು ಕಿಡಿಕಾರಿದರು‌.

ಸಚಿವರು ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಎಷ್ಟು ಅಂಗನವಾಡಿಗಳಿವೆ ಎಂದು ಲೆಕ್ಕ ಕೊಡಿ ಎಂಬ ಸುನಿಲ್ ಕುಮಾರ್ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ ಹೆಬ್ಬಾಳ್ಕರ್, ರಾಜ್ಯದಲ್ಲಿ ಸುಮಾರು 69 ಸಾವಿರ ಅಂಗನವಾಡಿ ಕಟ್ಟಡಗಳಿವೆ. ಅವುಗಳಲ್ಲಿ 12 ಸಾವಿರ ಬಾಡಿಗೆ ಕಟ್ಟಡಗಳು ಎಂದು ಹೇಳಿ, ಸುನಿಲ್ ಕುಮಾರ್ ಬಗ್ಗೆ ನಾನು ಎಲ್ಲಾ ಹೇಬೇಕೇ? ನನ್ನ ಇಲಾಖೆ ಬಗ್ಗೆ ಕೇಳ್ತೀರಾ? ಬನ್ನಿ ನಿಮಗೆ ನಾನು ಎಲ್ಲಾ ಡೀಟೆಲ್ಸ್ ಕೊಡುತ್ತೇನೆ ಎಂದು ಸವಾಲೆಸೆದರು.

ರಾಜ್ಯದಲ್ಲಿ ಅಂಗನವಾಡಿಗಳು ಎಷ್ಟಿವೆ, ಕಾರ್ಯಕರ್ತರು ಎಷ್ಟಿದ್ದಾರೆ ಎಲ್ಲಾ ನನಗೆ ಗೊತ್ತು. ಬಾಡಿಗೆ ಕಟ್ಟಡ ಎಷ್ಟು? ಸ್ವಂತ ಕಟ್ಟಡ ಎಷ್ಟು? ಹಳ್ಳಿಯಲ್ಲಿ ಎಷ್ಟಿದೆ, ಪೇಟೆಯಲ್ಲಿ ಎಷ್ಟಿದೆ, ಎಷ್ಟು ಸೋರುತ್ತಿದೆ ಎಲ್ಲವೂ ಗೊತ್ತು. ನಿಮ್ಮ ಕ್ಷೇತ್ರದಲ್ಲಿ ಎಷ್ಟು ಇದೆ ಎನ್ನುವುದೂ ಗೊತ್ತು ಎಂದು ಮಾತಿನ ಚಾಟಿ ಬೀಸಿದರು‌.

ಪ್ರತಿಭಟನೆ ಸಂವಿಧಾನ ಬದ್ಧ ಹಕ್ಕು: ಪ್ರತಿಭಟನೆಗೆ ಪ್ರಾಮುಖ್ಯತೆ ಇದೆ. ವಿರೋಧ ಪಕ್ಷಕ್ಕೆ ಮಾಡಲು ಬೇರೆ ಕೆಲಸ ಇಲ್ಲ, ಪ್ರತಿಭಟನೆ ಮಾಡಲಿ. ಜಿಎಸ್.ಟಿ ತರಲು ಆಗಿಲ್ಲ. ಅಭಿವೃದ್ಧಿಯಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ಅದರ ವಿರುದ್ಧ ಪ್ರತಿಭಟನೆ ಮಾಡಲಿ, ಅಸಮರ್ಥ ಸಂಸದರ ಬಗ್ಗೆ ಪ್ರತಿಭಟನೆ ಮಾಡಲಿ.

ನರೇಗಾ ಹಣ ಬಿಡುಗಡೆಯಾಗಿಲ್ಲ, ಅದರ ಬಗ್ಗೆ ಪ್ರತಿಭಟನೆ ಮಾಡಲು ಸಾಧ್ಯವೇ? ಜನರ ದಿಕ್ಕು ತಪ್ಪಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಪಕ್ಷದ ಆಂತರಿಕ ಕಚ್ಚಾಟ ಮುಚ್ಚಿಹಾಕಲು ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಬಿಜೆಪಿಯ ಡ್ರಾಮಾ.‌ ಬಿಜೆಪಿಯ ಕಾರ್ಯಕರ್ತರೇ ಬೇಸತ್ತು ಹೋಗಿದ್ದಾರೆ. ಹೋದಲ್ಲಿ ಬಂದಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.‌ ಜನರ‌ ದಿಕ್ಕು ತಪ್ಪಿಸಲು ಹೋರಾಟ, ಪ್ರತಿಭಟನೆ ಮಾಡಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಯಾರನ್ನೂ ಟಾರ್ಗೆಟ್ ಮಾಡುತ್ತಿಲ್ಲ: ಹಿಂದೂ ಜಾಗರಣ ವೇದಿಕೆ ಮುಖಂಡ ಶ್ರೀಕಾಂತ ಶೆಟ್ಟಿ ಕಾರ್ಕಳ ಅವರಿಗೆ ಬಾಗಲಕೋಟೆಗೆ ಮೂರು ತಿಂಗಳು ಪ್ರವೇಶ ನಿಷೇಧ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಯಾವ ವಾಗ್ಮಿಗಳು, ಭಾಷಣಕಾರರನ್ನೂ ನಾವು ಟಾರ್ಗೆಟ್ ಮಾಡುತ್ತಿಲ್ಲ‌. ಯಾವುದೇ ವಿಷಯ ವಿಷಯಾಧಾರಿತವಾಗಿರಬೇಕು, ವಿಷಯಾಂತರ ಆಗಬಾರದು ಎಂದರು‌.

ಸಮಾಜದಲ್ಲಿ ಕೋಮು ಸೌಹಾರ್ದತೆ ಕೆಡಿಸಬಾರದು, ಹಿತಾಸಕ್ತಿ ಕಾಪಾಡಬೇಕು. ವಿಷ ಬೀಜ ಬಿತ್ತಿ ಸಮಾಜ ಒಡೆಯಬಾರದು. ಅಂಥವರ ವಿರುದ್ಧ ಕಾನೂನು ಕ್ರಮ ಆಗುತ್ತದೆ. ಶ್ರೀಕಾಂತ ಶೆಟ್ಟಿಯವರ ಹಿಂದಿನ ಭಾಷಣಗಳನ್ನು ತೆಗೆದು ನೋಡಬೇಕು. ಆಗ ಎಲ್ಲ ವಿಚಾರ ಅರಿವಾಗುತ್ತದೆ ಎಂದರು. ‌