ಕೊಪ್ಪಳ: ಗವಿಸಿದ್ಧೇಶ್ವರ ಪದವಿ ಕಾಲೇಜಿನ ಪ್ರಾಧ್ಯಾಪಕನೋರ್ವ ವಿದ್ಯಾರ್ಥಿನಿಗೆ ಅಸಭ್ಯವಾಗಿ ಸಂದೇಶ ಕಳುಹಿಸಿದ್ದು, ವಿದ್ಯಾರ್ಥಿನಿ ತಾಯಿಯೇ ಪ್ರಾಧ್ಯಾಪಕನಿಗೆ ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ರೀತಿ ನಾಲ್ಕನೇ ಬಾರಿ ಘಟನೆ ನಡೆದು, ಒಂದೂವರೆ ತಿಂಗಳು ಕಳೆದರೂ ಆಡಳಿತ ಮಂಡಳಿ ಮಾತ್ರ ಕ್ರಮ ವಹಿಸದೇ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ಯಾರ್ಥಿಗಳಿಗೆ ವಾಟ್ಸಾಪ್‌ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂದು ಮೂರು ಬಾರಿ ವಿದ್ಯಾರ್ಥಿಗಳ ಕಡೆಯವರು ಥಳಿಸಿದ್ದರು. ಈ ಪೈಕಿ ಒಂದು ಬಾರಿ ಜಿಲ್ಲಾಡಳಿತ ಭವನದ ಬಳಿಯೇ ಧರ್ಮದೇಟು ನೀಡಿದ್ದಾರೆ. ಆದರೂ, ಪ್ರಾಧ್ಯಾಪಕ ಪಾಠ ಕಲಿತಿರಲಿಲ್ಲ. ಈಗಲೂ ತನ್ನ ಹಳೇ ಚಾಳಿಯನ್ನೇ ಮುಂದುವರೆಸಿದ್ದು, ಕಳೆದ ಕೆಲ ದಿನದ ಹಿಂದೆಯಷ್ಟೇ ವಿದ್ಯಾರ್ಥಿನಿಯ ತಾಯಿಯೇ ಕಾಲೇಜಿಗೆ ಬಂದು ಕೋಣೆಯೊಂದರಲ್ಲಿ ಪ್ರಾಧ್ಯಾಪಕನಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ ಎನ್ನಲಾಗಿದೆ.