ಮಂಗಳೂರು: ವಿದೇಶದಲ್ಲಿ ಕೈ ತುಂಬಾ ಸಂಬಳವಿರುವ ಉದ್ಯೋಗ ಕೊಡಿಸುವುದಾಗಿ ನಂಬಿಸಿ 4.50 ಕೋಟಿ ರೂ.ಗೂ ಹೆಚ್ಚು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮುಂಬೈನ ಇಬ್ಬರು ಸೂತ್ರಧಾರಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ದಿಲ್ ಶಾದ್ ಅಬ್ದುಲ್ ಸತ್ತಾರ್ ಖಾನ್ (45) ಹಾಗೂ ಇನ್ನೊಬ್ಬ ಸಾಹುಕಾರ ಕಿಶೋರ್ ಕುಮಾರ್ (34) ಇಬ್ಬರೂ ಮುಂಬೈಯವರು. ಸತಾರ್ ಖಾನ್ ನವಿ ಮುಂಬೈ, ಕಿಶೋರ್ ಕುಮಾರ್ ಥಾಣೆ ನಿವಾಸಿಯಾಗಿದ್ದಾರೆ.
ಇವರು ಮಂಗಳೂರಿನ ಬೆಂದೂರ್ವೆಲ್ನಲ್ಲಿ ಹೈಯರ್ ಗ್ರೋ ಇಂಟರ್ನ್ಯಾಷನಲ್ ಸಂಸ್ಥೆ ಕಚೇರಿ ತೆರೆದಿದ್ದರು. ವಿದೇಶದಲ್ಲಿ ಉದ್ಯೋಗ ಕೊಡಿಸುವುದು ವೀಸಾ ಮಾಡಿಸುವುದಾಗಿ ಅನೇಕ ಜನರಿಂದ ಹಣ ಪಡೆದುಕೊಂಡಿದ್ದರು. ಸುಮಾರು 282 ಜನರು ಮೋಸ ಹೋಗಿದ್ದರು. ಒಟ್ಟು 4.50 ಕೋಟಿ ರೂ. ವಂಚನೆ ನಡೆದಿತ್ತು. ಈ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂದರ್ಭ ತನಿಖೆ ನಡೆಸಿದ ಪೊಲೀಸರು ವಸೀಉಲ್ಲಾಖಾನ್ ಎಂಬಾತನನ್ನ ಬಂಧಿಸಿ ಜೈಲಿಗೆ ತಳ್ಳಿದ್ದರು.
ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರ ಆದೇಶದಂತೆ ಮಂಗಳೂರು ಸಿಸಿಬಿ ಪೊಲೀಸರು ತನಿಖೆಯನ್ನು ಮುಂದುವರಿಸಿ ಮುಂಬೈಗೆ ತೆರಳಿ ಇಡೀ ಜಾಲದ ಸೂತ್ರಧಾರಿಗಳಾದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.