ವಿಜಯೇಂದ್ರ ಬಣಕ್ಕೆ ದಾವಣಗೆರೆಯಲ್ಲಿ ಉತ್ತರ

ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಣಕ್ಕೆ ದಾವಣಗೆರೆಯಲ್ಲಿಯೇ ಸಮಾವೇಶ ಮಾಡುವ ಮೂಲಕ ತಕ್ಕ ಉತ್ತರ ನೀಡುವುದಾಗಿ ಬಿಜೆಪಿ ರೆಬಲ್ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಬೆಳಗಾವಿಯಲ್ಲಿಂದು ವಕ್ಫ್ ವಿರುದ್ಧ ನಡೆದ ಜನಜಾಗೃತಿ ಸಭೆಯಲ್ಲಿ ಈ ಮಾತನ್ನು ಸ್ಪಷ್ಟಪಡಿಸಿದ ಅವರು, ನಾವೇನೂ ಸ್ವಾರ್ಥಕ್ಕಾಗಿ ಈ ಹೋರಾಟ ಮಾಡುತ್ತಿಲ್ಲ. ನಮ್ಮ ಹೋರಾಟ ರೈತರ, ಜನರ ಪರವಾಗಿ ಹಾಗೂ ಸನಾತನ ಧರ್ಮದ ಉಳಿವಿಗಾಗಿದೆ ಎಂದರು.
ಈ ಹೋರಾಟ ಯಾರನ್ನೂ ಮುಖ್ಯಮಂತ್ರಿ ಅಥವಾ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಲು ಅಲ್ಲ. ಈ ರಾಜ್ಯವನ್ನು ರಾಮರಾಜ್ಯ ಮಾಡಲು ಸಂಕಲ್ಪ ಮಾಡಲಾಗಿದ್ದು, ಆ ದಿಸೆಯಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಕ್ಫ್ ರದ್ದಾದರೆ ನಾನು ಪ್ರಧಾನಿ ಆದಷ್ಟೇ ಸಂತಸ ಪಡುತ್ತೇನೆ ಎಂದ ಅವರು, ಇದು ಕೇವಲ ಟ್ರೇಲರ್ ಅಷ್ಟೇ, ಇನ್ನೂ ಫಿಚ್ಚರ್ ಬಾಕಿ ಇದೇ ಎಂದು ಮಾರ್ಮಿಕವಾಗಿ ನುಡಿದರು.
ಒಂದೆರೆಡು ದಿನಗಳಲ್ಲಿ ದೆಹಲಿಗೆ ನಾವೆಲ್ಲ ಹೊರಟಿದ್ದು ಜಂಟಿ ಸದನ ಸಮಿತಿ ಅಧ್ಯಕ್ಷ, ಸದಸ್ಯರನ್ನು ಭೇಟಿಯಾಗಿ ವರದಿ ಸಲ್ಲಿಸುತ್ತೇವೆ. ಅಲ್ಲದೇ, ಚಳಿಗಾಲದ ಅಧಿವೇಶನದ ಬಳಿಕ ದಾವಣಗೆರೆಯಲ್ಲಿ ವಕ್ಫ್ ಮಂಡಳಿಯಿಂದ ಬಾಧಿತರಾದ ರೈತರು, ಜನಸಾಮಾನ್ಯರ ಬೃಹತ್ ಸಮಾವೇಶ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.
ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ, ವಕ್ಫ್ ವಿರುದ್ಧದ ಹೋರಾಟ ಬೀದರಿನಿಂದ ಆರಂಭವಾಗಿ ಬೆಳಗಾವಿವರೆಗೂ ಬಂದಿದೆ. ಮೊದಲ ಹಂತದ ಪ್ರತಿಭಟನೆ
ಕೊನೆಯಾಗುತ್ತದೆ. ಎರಡನೇ ಹಂತದಲ್ಲಿ ದಿನಾಂಕ ನಿಗದಿ ಮಾಡುತ್ತೇವೆ ಎಂದು ಹೇಳಿದರು.