ಇತ್ತೀಚಿಗೆ ಕಮಲ ನಾಟ್ಯ ಸಂಘದ ಬಾಲಕ ವಿಜ್ಜು ಅಣ್ಣ ಹಾಗೂ ಗುತ್ನಾಳಣ್ಣ ಗುದ್ದಾಡಿ ಗುದ್ದಾಡಿ ಗುದುಮುರುಗಿ ಹಾಕುತ್ತಿದ್ದಾರೆ ಎಂದು ಮದ್ರಾಮ ಣ್ಣೋರು ತಮ್ಮ ಆಪ್ತರ ಮುಂದೆ ನಗು ನಗುತ್ತ ಹೇಳಿದ್ದು ಈಗ ಗುಟ್ಟಾಗೇನೂ ಉಳಿದಿಲ್ಲ.
ಅವರೇಕೆ ಗುದ್ದಾಡುತ್ತಿದ್ದಾರೆ? ಅದರ ಹಿಂದಿನ ಮರ್ಮವೇನು? ಎಂಥ ಸಿಟ್ಯೂರಪ್ಪನವರ ಮಾತನ್ನೇ ಧಿಕ್ಕರಿಸುವ ಗುತ್ನಾಳಣ್ಣೋರು, ಗುತ್ತಾಳಣ್ಣನವರ ಬೆನ್ನುಬಿದ್ದ ಮಾಣುಕಾಚಾರ್ಯರು, ಇಬ್ಬರ ಗುದ್ದಾಟ-ಮೂರನೆಯವರ ಬಡಿದಾಟ ಎಂಬ ಕಾದಂಬರಿ ಬರೆಯಲು ರೆಡಿಯಾಗಿರುವ ಕಮೀರಣ್ಣೋರು. ಹೀಗೆ ಅಣ್ಣ ಅನಿಸಿಕೊಂಡವರು ಗುದ್ದಾಡಿದರೆ ನಮ್ಮ ಪಾಡೇನು ಎಂದು ಕಮಲ ಕಂಪನಿಯ ಬಾಲಕರಾದ ಎಂಗ್ರಿ ಮಿಡ್ಲ್ ಮ್ಯಾನ್ ಕೆ.ಟಿ. ಕವಿ ಗಡ್ಡ ನೀವಿಕೊಂಡು ಇಬ್ಬರನ್ನೂ ನನ್ನ ಕಡೆ ಕೊಡಿ ಹೇಗೆ ಮಾಡುತ್ತೇನೆ ನೋಡಿ ಎಂದು ಮೀಸೆ ಬದಲು ಗಡ್ಡ ತಿರುವಿ ತಿರುವಿ ಮಾತನಾಡಿದರಂತೆ. ಅತ್ತ ಸೋದಿಮಾಮಾನಿಗೆ ಅದ್ಯಾರೋ ಈ ವಿಷಯವನ್ನು ತಿಳಿಸಿದ್ದಾರೆ. ಇದೇನಾಯಿತು…ಇದೇನಾಯಿತು…ಕಮಲವನ್ನು ನಿಮ್ಮ ಕೈಗೆ ಕೊಟ್ಟು ಉಳಿಸಿರಿ-ಬೆಳೆಸಿರಿ ಎಂದು ಹೇಳಿರುವುದು ನಿಮಗೆ ಲಕ್ಷ್ಯದಲ್ಲಿ ಇಲ್ಲವೇ? ಕೆಲವರು ನೀರು ಹಾಕಿದರೆ ಇನ್ನು ಕೆಲವರು ಸಾರ್ ನಾನು ಗೊಬ್ಬರ ಹಾಕುತ್ತೇನೆ ಎಂದು ಹೇಳಿ ಅದ್ಯಾವುದೋ ಕರಿಪುಡಿ ಹಾಕಿ ಹಾಕಿ ಗಿಡವನ್ನು ಒಣಗಿಸುತ್ತಿದ್ದಾರೆ. ಕೊಟ್ಟರೂ ಗಿಡ ಬೆಳೆಸಲು ಬಾರದಿದ್ದರೆ ನಿಮಗೇನು ಮಾಡಬೇಕು? ಏನಾದರೂ ಮಾಡಿಕೊಳ್ಳಲಿ ಬುಡಿ ಸ್ವಾಮಿ ಎಂದು ಮಾಮೋರು ದಳದಳ ಕಣ್ಣೀರು ಹಾಕುತ್ತಿದ್ದಂತೆ ದಳದ ಸುಮಾರಣ್ಣೋರು ಎಂಟ್ರಿಯಾಗಿ..ನೋಡಿ ಸಾರ್…ನಿಮ್ಮ ಕಣ್ಣಲ್ಲೂ ದಳದಳ…ನಿಮಗೆ ನಾವಿದ್ದೇವೆ. ನಮಗೆ ನೀವಿದ್ದೀರಿ…ಮುಂದಿನ ಸಲ ನಮಗೆ ನೂರು ನಿಮಗೆ ನೂರಿಪ್ಪತ್ನಾಲ್ಕು. ಈ ವಿಷಯ ಕುರಿತು ಅಪ್ಪಾರ ಜತೆ ಮಾತನಾಡುತ್ತೇನೆ.
ಲೇವಣ್ಣನೂ ಹೂಂ ಅಂತಾನೆ..ನನ್ನ ಕಂದನೂ ಎಸ್ ಅಂತಾನೆ ನೀವೊಂದು ಸಲ ವಿಚಾರ ಮಾಡಿ ಕಾಕಾ ಅವರನ್ನೂ ಕೇಳಿ ಅಂದರು. ಅಯ್ಯೋ ನಾನು ಕಮಲದ ಗಿಡದ ಬಗ್ಗೆ ಮಾತನಾಡಿದರೆ ನೀವು ಏನೇನೋ ಮಾತಾಡ್ತಿದೀರ ಹೋಗಿಪಾ ಎಂದು ಕಳಿಸಿದರು.