ವಾಂತಿ-ಭೇದಿ ಪ್ರಕರಣ: ಮೂವರು ಸಾವು?

ಯಾದಗಿರಿ: ವಾಂತಿ-ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದರೆನ್ನಲಾದ ಜಿಲ್ಲೆಯ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದ ಮೂವರು ಸಾವನ್ನಪ್ಪಿದ್ದು, ಕಲುಷಿತ ನೀರು ಸೇವನೆ ಶಂಕೆ ಗ್ರಾಮಸ್ಥರು ವ್ಯಕ್ತಪಡಿಸಿದರೆ, ಅಧಿಕಾರಿ ವರ್ಗ ಇದನ್ನು ತಳ್ಳಿಹಾಕಿದೆ.

ಪ್ರಕರಣದ ವಿವರ
ಕಳೆದ ಹಲವು ದಿನಗಳಿಂದ ತಿಪ್ಪನಟಗಿ ಗ್ರಾಮದಲ್ಲಿ ವಾಂತಿ-ಭೇದಿ ಉಲ್ಬಣಗೊಂಡು ಹಲವರು ಆಸ್ಪತ್ರೆಗೆ ಸೇರಿದ್ದಾರೆ. ಈ ನಡುವೆ ಕಳೆದ ಹತ್ತು ದಿನಗಳ ಹಿಂದೆ ವಾಂತಿ-ಭೇದಿಯಿಂದ ಖಾಸಗಿ ಹಾಗೂ ಬೇರೆ ಬೇರೆ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರೆನ್ನಲಾದ ದೇವಿಕೆಮ್ಮ ಹೊಟ್ಟಿಮ (48), ವೆಂಕಮ್ಮ (60), ರಾಮಣ್ಣ ಪೂಜಾರಿ (50) ಮೃತಪಟ್ಟಿದ್ದಾರೆ. ಇನ್ನೂ ನಾಲ್ವರು ಸ್ಥಿತಿ ಚಿಂತಾಜನಕವಾಗಿದ್ದು, ಕಲಬುರಗಿ ನಗರದ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಮೂವರ ಸಾವಿಗೆ ಕಲುಷಿತ ನೀರು ಸೇವನೆ ಕಾರಣವೆಂದು ಹೇಳಲಾಗುತ್ತಿದೆ. ಆದರೆ, ಅಧಿಕಾರಿಗಳ ವರ್ಗ ಮಾತ್ರ ಇದನ್ನು ಸದ್ಯಕ್ಕೆ ತಳ್ಳಿ ಹಾಕಿದೆ. ಇದೆಲ್ಲದಕ್ಕೂ ಪರೀಕ್ಷೆಗೆ ಕಳುಹಿಸಲಾಗಿರುವ ಗ್ರಾಮದ ವಿವಿಧ ನೀರಿನ ಮೂಲಗಳ ವರದಿ ಬಂದ ನಂತರವೇ ಸತ್ಯಾಸತ್ಯತೆ ಹೊರಬೀಳಬೇಕಾಗಿದೆ. ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಆರೋಗ್ಯ ಕೇಂದ್ರ ಸ್ಥಾಪಿಸಿ ಅಸ್ವಸ್ಥರ ಚಿಕಿತ್ಸೆಗೆ ಕ್ರಮಕೈಗೊಳ್ಳಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪುರ ಭೇಟಿ
ಇನ್ನು ವಾಂತಿ, ಭೇದಿ ಪ್ರಕರಣದ ತಿಳಿದು ತಿಪ್ಪನಟಗಿ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಆರ್.ಒ ಪ್ಲಾಂಟ್‌ನತ್ತ ತೆರಳಿ ಪರಿಶೀಲಿಸಿದರು. ಈ ವೇಳೆ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಪಿಡಿಓ ಯಾವುದೇ ಸ್ವಚ್ಛತೆ ಮಾಡಿಲ್ಲ. ಗ್ರಾಮಕ್ಕೆ ಒಂದು ಬಾರಿಯೂ ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಧ್ಯೆ ಪ್ರವೇಶಿಸಿ ಸಚಿವರು, ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಲ್ಯಾಬ್‌ಗೆ ಕಳುಸಿರುವ ನೀರಿನ ವರದಿ ಬಂದ ನಂತರವೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗುವುದು ಎಂದರು.
ಇನ್ನು ಮೂವರ ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ಕಲುಷಿತ ನೀರು ಸೇವನೆಯಿಂದ ಸಾವಾಗಿಲ್ಲ. ಬೇರೆ ಬೇರೆ ರೋಗಗಳಿಂದ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ನೀರಿನ ವರದಿ ನಂತರವೇ ಎಲ್ಲಾ ತಿಳಿಯಲಿದೆ ಎಂದಿದ್ದಾರೆ.