ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಕಾಣಿಸಿಕೊಂಡ ಹೊಗೆ: ತಪ್ಪಿದ ಭಾರಿ ಅನಾಹುತ

ದಾವಣಗೆರೆ: ಧಾರವಾಡದಿಂದ ಬೆಂಗಳೂರಿಗೆ ಹೊರಟಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಚಕ್ರವೊಂದರಲ್ಲಿ ಆಕಸ್ಮಿಕವಾಗಿ ಹೊಗೆ ಕಾಣಿಸಿಕೊಂಡ ಘಟನೆ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ರೈಲ್ವೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ್ದು, ರೈಲಿನಲ್ಲಿದ್ದ ನೂರಾರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಧಾರವಾಡದಿಂದ ಬೆಳಗ್ಗೆ ಹೊರಟ್ಟಿದ್ದ ವಂದೇ ಭಾರತ್ ರೈಲು ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ಸಮಯಕ್ಕೆ ಸರಿಯಾಗಿ ಬಂದು ನಿಲುಗಡೆ ಆಗಿದೆ. ಈ ಸಂದರ್ಭದಲ್ಲಿ ಚಕ್ರವೊಂದರಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೆ ಸಿಬ್ಬಂದಿ, ರೈಲನ್ನು ದಾವಣಗೆರೆಯಲ್ಲಿ ನಿಲ್ಲಿಸಿದ್ದಾರೆ. ರೈಲಿನಲ್ಲಿದ್ದ ಪ್ರಯಾಣಿಕರು ಕ್ಷಣಕಾಲ ಆತಂಕಗೊಂಡಿದ್ದರೂ, ಯಾವುದೇ ಪ್ರಾಣಹಾನಿ ಅಥವಾ ದೊಡ್ಡ ಮಟ್ಟದ ಹಾನಿ ಸಂಭವಿಸಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಂದೇ ಭಾರತ್ ರೈಲನ್ನು ದಾವಣಗೆರೆಯಲ್ಲಿ ನಿಲುಗಡೆಗೊಳಿಸಲಾಯಿತು. ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರನ್ನು ತಕ್ಷಣವೇ ಮತ್ತೊಂದು ರೈಲಿಗೆ ಸ್ಥಳಾಂತರಿಸಲಾಯಿತು. ನಂತರ, ಅವರನ್ನು ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ ಕಳುಹಿಸಿಕೊಡಲಾಯಿತು.
ಈ ಘಟನೆಯಲ್ಲಿ ಗೇಟ್‌ಮ್ಯಾನ್ ಕೂಡ ಪ್ರಮುಖ ಪಾತ್ರ ವಹಿಸಿದ್ದು, ಅವರ ಸಮಯೋಚಿತ ಮಾಹಿತಿಯಿಂದ ಸಾವಿರಾರು ಜನರ ಪ್ರಾಣ ಉಳಿಯಿತು ಎಂದು ರೈಲ್ವೆ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ. ವಂದೇ ಭಾರತ್ ರೈಲಿನಲ್ಲಿ ಹೊಗೆ ಕಾಣಿಸಿಕೊಳ್ಳಲು ಕಾರಣವೇನೆಂದು ತಿಳಿಯಲು ತನಿಖೆ ನಡೆಯುತ್ತಿದೆ.
ಧಾರವಾಡದಿಂದ ಬೆಂಗಳೂರಿಗೆ ಹೊರಟ್ಟಿದ್ದ ವಂದೇ ಭಾರತ್ ರೈಲಿನ ಚಕ್ರದಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಜನಶತಾಬ್ದಿ ರೈಲಿನಲ್ಲಿ ಬೆಂಗಳೂರಿಗೆ ಕಳುಹಿಸಲಾಗಿದೆ. ಬಳಿಕ ಹರಿಹರ ಕಾರ್ಯಾಗಾರಕ್ಕೆ ರೈಲನ್ನು ಕಳುಹಿಸಲಾಗಿದೆ.